ಮಮತಾ, ದೇವೇಗೌಡರ ವಿರುದ್ಧ ಬಿಜೆಪಿ ವಾಗ್ದಾಳಿ
ಬೆಂಗಳೂರು, ಫೆ.4: ಸಿಬಿಐ ಅಧಿಕಾರಿಗಳ ಭೇಟಿ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸಿಕೊಂಡ ರೀತಿ ಅಕ್ಷಮ್ಯ, ದೇಶದ ಇತಿಹಾಸದಲ್ಲೇ ಪ್ರಾಂತೀಯವಾಗಿ ಅಸ್ತಿತ್ವ ಉಳಿಸಿಕೊಳ್ಳಲು ದೇಶದ ಹಿತಕ್ಕೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಮತಾ ಸಿಬಿಐ ವಿಚಾರವಾಗಿ ನಡೆದುಕೊಂಡ ರೀತಿ ನೋಡಿದರೆ, ದೇಶವನ್ನ ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದರು.
ಮಮತಾ ಸಂವಿಧಾನ ಬಾಹಿರವಾಗಿ ಕೆಲಸ ಮಾಡಿದ್ದಾರೆ. ಗಣರಾಜ್ಯದ ಪರಿಕಲ್ಪನೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಕೂಡಲೇ ಅವರ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ತರಬೇಕು. ಇಲ್ಲದೇ ಹೋದರೆ ಇತರ ರಾಜ್ಯಗಳೂ ಕೂಡ ಅವರನ್ನೇ ಅನುಕರಿಸಲಿವೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕುಟುಂಬದ ವಿಸ್ತರಣೆ ಆಗಬೇಕು. ಅಪ್ಪ ಆಯಿತು, ಮಕ್ಕಳು ಆಯಿತು, ಸೊಸೆಯಂದಿರು ಆಯಿತು, ಈಗ ಮೊಮ್ಮಕ್ಕಳ ಸರದಿ. ಹಾಸನ, ಮಂಡ್ಯ, ರಾಮನಗರ ಆಯಿತು ಈಗ ಬೆಂಗಳೂರು, ಮೈಸೂರಿಗೆ ಅವರ ಕುಟುಂಬವನ್ನು ವಿಸ್ತರಿಸಲು ಹೊರಟಿದ್ದಾರೆ. ಅದಕ್ಕಾಗಿ ಅವರು ಮಮತಾ ಪರ ಹೇಳಿಕೆ ನೀಡಿದ್ದಾರೆ. ಮಮತಾ, ದೇವೇಗೌಡ, ಅಖಿಲೇಶ್ ಯಾದವ್, ಚಂದ್ರಬಾಬು ನಾಯ್ಡು ಇವರೆಲ್ಲಾ ಪ್ರಾದೇಶಿಕವಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ದೇಶದ ಹಿತ ಬಲಿಕೊಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.