ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆಗೆ ಅಡ್ಡಿಪಡಿಸುವುದಿಲ್ಲ: ವಿಪಕ್ಷ ನಾಯಕ ಯಡಿಯೂರಪ್ಪ

Update: 2019-02-05 12:40 GMT

ಬೆಂಗಳೂರು, ಫೆ. 5: ರಾಜ್ಯಪಾಲರ ಭಾಷಣಕ್ಕೆ ಅಥವಾ ಬಜೆಟ್ ಮಂಡನೆಗೆ ನಾವು ಯಾವುದೇ ರೀತಿಯ ಅಡ್ಡಿಪಡಿಸುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಡಾಲರ್ಸ್‌ ಕಾಲನಿಯಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವ ವೇಳೆ ಬಿಜೆಪಿ ಅಡ್ಡಿಪಡಿಸಲಿದೆ ಎಂಬುದರಲ್ಲಿ ಹುರುಳಿಲ್ಲ. ಬಜೆಟ್ ಮಂಡನೆಗೂ ನಮ್ಮದೇನೂ ಅಭ್ಯಂತರವಿಲ್ಲ.

ವಿಪಕ್ಷವಾಗಿ ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ವಿಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆ. ಸದನದ ಒಳಗೂ ಮತ್ತು ಹೊರಗೂ ನಾವು ಮೈತ್ರಿ ಸರಕಾರದ ತಪ್ಪುಗಳನ್ನು ಪತ್ತೆ ಹಚ್ಚಿ ಎಚ್ಚರಿಸುವ ಕೆಲಸವನ್ನಷ್ಟೇ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಬಜೆಟ್ ಮಂಡನೆಗೆ ನಾವು ಅಡ್ಡಿಪಡಿಸುತ್ತೇವೆ ಎಂಬುದು ಸತ್ಯಕ್ಕೆ ದೂರ ಎಂದ ಅವರು, ‘ಆಪರೇಷನ್ ಕಮಲದ ರೂವಾರಿ ಬಿಎಸ್‌ವೈ’ ಎಂಬ ದೇವೇಗೌಡರ ಆರೋಪ ಸಲ್ಲ. ತಮ್ಮ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ನಮ್ಮ ವಿರುದ್ಧ ಆರೋಪ ಸರಿಯಲ್ಲ ಎಂದು ಆಕ್ಷೇಪಿಸಿದರು.

‘ನಾವು ಯಾವ ಆಪರೇಷನ್ ಕಮಲವನ್ನೂ ನಡೆಸುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ನಂಬಿಕೆ ಇಲ್ಲದೆ ಶಾಸಕರು ಅಸಮಾಧಾನಗೊಂಡು ಹೊರಹೋದರೆ ಅದಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲ’
-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News