ಜಮೀನು ವಿವಾದ : ತಂದೆ-ಮಗನ ಕೊಲೆ

Update: 2019-02-05 13:34 GMT

ಬೆಂಗಳೂರು, ಫೆ.5: ಜಮೀನು ವಿವಾದದ ಸಂಬಂಧ ತಂದೆ ಮತ್ತು ಮಗನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಹೊಸಕೋಟೆಯ ಮುತ್ತಕದಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮುತ್ತಕದಹಳ್ಳಿಯ ಕೃಷಿಕ ನಾರಾಯಣರೆಡ್ಡಿ(60) ಮತ್ತವರ ಪುತ್ರ ಲಿಂಗಾರೆಡ್ಡಿ(32)ಕೊಲೆಯಾದ ವ್ಯಕ್ತಿಗಳೆಂದು ತಿಳಿದುಬಂದಿದ್ದು, ಕೃತ್ಯವೆಸಗಿದ ಬಾಬು ಅನುಗೊಂಡನಹಳ್ಳಿ ಎಂಬಾತ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ನಾರಾಯಣರೆಡ್ಡಿ ಅವರು ಆರೋಪಿ ಬಾಬು(35)ಗೆ ಮುತ್ತಕದಹಳ್ಳಿಯ ಸರ್ವೆ ನಂ.18 ರಲ್ಲಿ 2 ಎಕರೆ ಜಮೀನು ಮಾರಾಟ ಮಾಡಿದ್ದರು. ಆದರೆ, ಅದನ್ನು ನೋಂದಣಿ ಮಾಡಿಕೊಟ್ಟಿರಲಿಲ್ಲ. ಅಂದಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಕಳೆದ 15 ವರ್ಷಗಳಿಂದಲೂ ಜಮೀನು ವಿವಾದದ ಕುರಿತಾಗಿ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ಮುಗಿದು ತೀರ್ಪು ಹೊರಬರದಿದ್ದರಿಂದ ಆಕ್ರೋಶಗೊಂಡ ಬಾಬು ಸೋಮವಾರ ಸಂಜೆ ನಾರಾಯಣರೆಡ್ಡಿ ಹಾಗೂ ಆತನ ಮಗ ಲಿಂಗಾರೆಡ್ಡಿ ಜಮೀನಿನಲ್ಲಿ ನೀಲಿಗಿರಿ ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದಾಗ ಏಕಾಏಕಿ ಬಂದು ಜಗಳ ತೆಗೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಬಳಿಕ ಅನುಗೊಂಡನಹಳ್ಳಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News