ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ವಿಚಾರಣೆ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಫೆ.5: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ಆರೋಪ ಸಂಬಂಧ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಗುಂಡ್ಲುಪೇಟೆ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
2017ರಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ನಡೆದಿತ್ತು. ಆಗ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಎ.6ರಂದು ನಡೆದಿದ್ದ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದ್ದರು. ಈ ವೇಳೆ ಗುಂಡ್ಲುಪೇಟೆಯ ಅಣ್ಣೂರುಕೇರಿ ಗ್ರಾಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತದಾರರಿಗೆ ಹಣದ ಆಮಿಷ ಒಡ್ಡಿದರು ಎಂದು ಆರೋಪಿಸಿ ಬಿಜೆಪಿಯ ವೈ.ಎನ್.ಅಭಿಷೇಕ್ ಕುಮಾರ್ ಅವರು ಚುನಾಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದ ಗುಂಡ್ಲುಪೇಟೆ ಪೊಲೀಸರು, ತನಿಖೆ ಪೂರ್ಣಗೊಳಿಸಿ 2017ರ ಜು.8ರಂದು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆ ಪ್ರಕರಣದ ವಿಚಾರಣೆ ಗುಂಡ್ಲುಪೇಟೆ ಜೆಎಂಎಫ್‌ಸಿ ನ್ಯಾಯಾಲಯಲ್ಲಿ ನಡೆಯುತ್ತಿತ್ತು. ಅದರ ರದ್ದತಿಗೆ ಕೋರಿ ಲಕ್ಷ್ಮೀ ಹೆಬ್ಬಾಳ್ಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು.