ವಿನಯ್ ಅಪಹರಣ ಯತ್ನ ಪ್ರಕರಣ : ಯಡಿಯೂರಪ್ಪ ಆಪ್ತ ಸಹಾಯಕನಿಗೆ ಸಿಸಿಬಿ ನೋಟಿಸ್
ಬೆಂಗಳೂರು, ಫೆ.5: ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕ ಎನ್ನಲಾದ ವಿನಯ್ ಅಪಹರಣ ಯತ್ನ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕನಿಗೆ ಸಿಸಿಬಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಎಂಬಾತನಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಂತೋಷ್ ಈ ಹಿಂದೆ ಜಾಮೀನು ಪಡೆದು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಇದೀಗ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ ಅಲ್ಲದೆ, ಸೋಮವಾರ ವಿನಯ್ ಸಿಸಿಬಿ ಪೊಲೀಸರ ಎದುರು ಹಾಜರಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲೇ ಸಿಸಿಬಿ ಪೊಲೀಸರು ಸಂತೋಷ್ಗೆ ನೋಟಿಸ್ ಜಾರಿ ಮಾಡಿದ್ದಾರೆ.
2017 ರ ಮೇ 11 ರಂದು ವಿನಯ್ ಕುಮಾರ್ ಅಪಹರಣ ಪ್ರಯತ್ನ ನಡೆಸಲಾಗಿತ್ತು.ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು.