ಅಗಲಿದ ನಾಯಕರಿಗೆ ವಿಧಾನ ಪರಿಷತ್‌ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

Update: 2019-02-06 13:12 GMT

ಬೆಂಗಳೂರು,ಫೆ.6: ಸಿದ್ಧಲಿಂಗಾ ಮಠದ ಶಿವಕುಮಾರ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡೀಸ್ ಹಾಗೂ ಕನ್ನಡ ಚಲನಚಿತ್ರರಂಗದ ಹಿರಿಯ ನಟ ಲೋಕನಾಥ್ ನಿಧನಕ್ಕೆ ವಿಧಾನ ಪರಿಷತ್‌ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬುಧವಾರ ಸಂತಾಪ ಸೂಚಕ ನಿರ್ಣಯ ಮಂಡಿಸಿ ಮಾತನಾಡಿದ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಿಕ್ಷಣ ಕ್ಷೇತ್ರಕ್ಕೆ ಸಿದ್ದಗಂಗಾ ಶ್ರೀಗಳ ಕೊಡುಗೆ ಅನನ್ಯವಾದದ್ದು. ಶಿಕ್ಷಣ ಎಂಬುದು ಕೇವಲ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಕಾಲಾವಧಿಯಲ್ಲಿ ಎಲ್ಲರಿಗೂ ಉಚಿತ ಶಿಕ್ಷಣವನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಗುಣಗಾನ ಮಾಡಿದರು.

ಸುಮಾರು 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನಡೆಸಿದ ಶಿವಕುಮಾರ ಶ್ರೀಗಳು, ನಾಡಿನೆಲ್ಲೆಡೆಯಿಂದ ಬರುವ ಸಾವಿರಾರು ನಿರ್ಗತಿಕ ಮತ್ತು ಬಡಮಕ್ಕಳಿಗೆ ಅಕ್ಷರ, ಅನ್ನ ಹಾಗೂ ಆಶ್ರಯ ನೀಡಿ ಬದುಕು ಕಟ್ಟಿಕೊಟ್ಟರು. ಆ ಮೂಲಕ ಮಠದ ಹೆಸರಿಗೆ ಮೆರಗು ತಂದರು. ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಆಧುನಿಕ ಬಸವಣ್ಣ ಎನಿಸಿದರು ಎಂದು ಅವರು ಬಣ್ಣಿಸಿದರು.

ಶ್ರೀಗಳ ಆಶೀರ್ವಾದದಿಂದ ಬೆಳೆದ ಅಸಂಖ್ಯಾತ ವಿದ್ಯಾರ್ಥಿಗಳು ನಾಡಿನ, ದೇಶದ ಗಡಿದಾಟಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಸಿದ್ದಲಿಂಗಾ ಮಠದ ಹೆಸರನ್ನು ಎಲ್ಲೆಡೆ ಪಸರಿಸಿದ್ದಾರೆ. ಪದ್ಮಭೂಷಣ, ಕರ್ನಾಟಕ ರತ್ನ, ಗೌರವ ಡಾಕ್ಟರೇಟ್ ಪ್ರಶಸ್ತಿಗಳಲ್ಲದೆ ಹತ್ತು ಹಲವು ಪುರಸ್ಕಾರಗಳಿಗೆ ಭಾಜನರಾಗಿರುವುದು ಅವರ ಸೇವೆಗೆ ಸಂದ ಗೌರವವೆಂದು ಅವರು ಸ್ಮರಿಸಿದರು.

ಸಮಾಜವಾದಿ ಮತ್ತು ಕಾರ್ಮಿಕರ ನಾಯಕರಾಗಿದ್ದ ಸರಳ-ಸಜ್ಜನ ರಾಜಕಾರಣಿ, ದಕ್ಷ ಆಡಳಿತಗಾರ ಜಾರ್ಜ್ ಫರ್ನಾಂಡೀಸ್ ನಿಧನ ಓರ್ವ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ. ರಕ್ಷಣಾ ಸಚಿವರಾಗಿ ಅವರು ಮಾಡಿದ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.

ಖ್ಯಾತ ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್, ಒಂದು ಸಾವಿರ ನಾಟಕ, 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನೆ, ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರ ನಿಧನದಿಂದ ಅಪ್ರತಿಮ ಕಲಾವಿದರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಅವರು ಶೋಕ ವ್ಯಕ್ತಪಡಿಸಿದರು.

ಸಭಾ ನಾಯಕಿ ಜಯಮಾಲ ಮಾತನಾಡಿ, ಶರಣರ ಗುಣವನ್ನು ಮರಣದಲ್ಲಿ ನೋಡು ಎಂಬಂತೆ ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿಯವರು ಪ್ರತಿದಿನ 10 ಸಾವಿರ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ, ಆಶ್ರಯ ನೀಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಅವರು ಬಿಟ್ಟು ಹೋದ ಹೆಜ್ಜೆ ಗುರುತು, ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್ ಸರಳ ಸಜ್ಜನ ಮಾದರಿ ರಾಜಕಾರಣಿಯಾಗಿದ್ದರು. ಅವರ ರಾಜಕೀಯ ಕ್ಷೇತ್ರದಲ್ಲಿ ಬಿಟ್ಟುಹೋಗಿರುವ ತತ್ವಾದರ್ಶಗಳು ಜನಪ್ರತಿನಿಧಿಗಳಿಗೆ ಮಾದರಿಯಾಗುವಂತಹದ್ದಾಗಿದೆ ಎಂದು ಸ್ಮರಿಸಿದರು.

ಹಿರಿಯ ನಾಯಕ ಲೋಕನಾಥ್ ಅವರ ಅಭಿನಯವನ್ನು ಸ್ಮರಿಸಿದ ಅವರು, ಹಿರಿಯ ನಟ ಲೋಕನಾಥ್ ನೂರಾರು ಸಿನೆಮಾ, ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರ ಕಂಚಿನ ಕಂಠ ಹಾಗೂ ಅಭಿನಯದಿಂದ ಕಲಾಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ಅಂತಹ ಅಪ್ರತಿಮ ಕಲಾವಿದರೊಬ್ಬರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ ಎಂದು ಅವರು ಹೇಳಿದರು.

ಪ್ರತಿ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶತಮಾನದ ಸಂತ, ಸಹಸ್ರಾರು ಮಕ್ಕಳಿಗೆ ಶೈಕ್ಷಣಿಕ, ಧಾರ್ಮಿಕ ಪ್ರಜ್ಞೆ ಬಿತ್ತಿದ ಪುಣ್ಯಾತ್ಮ ಶಿವಕುಮಾರ ಸ್ವಾಮೀಜಿಗಳು ಎಂದು ಬಣ್ಣಿಸಿದರು. ಸಿದ್ದಲಿಂಗಾ ಮಠವೆ ಒಂದು ನ್ಯಾಯಾಲಯದಂತೆ ಕೆಲಸ ಮಾಡುತ್ತಿತ್ತು ಎಂದು ಹೇಳಿದರು.

ಜಾರ್ಜ್ ಫರ್ನಾಂಡೀಸ್ ವ್ಯಕ್ತಿಯಾಗಿ, ಶಕ್ತಿಯಾಗಿ ಕೊಂಕಣ ರೈಲ್ವೆ ರೂವಾರಿಯಾಗಿ, ನೌಕಾನೆಲೆ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದು ಎಂದು ಅವರು ಹೇಳಿದರು.

ಕನ್ನಡ ಚಿತ್ರರಂಗದ ಲೋಕನಾಥ ಅಭಿನಯ ಜನಮಾನಸದಿಂದ ಎಂದಿಗೂ ಮಾಸುವುದಿಲ್ಲ. ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಅವರ ಅಭಿನಯ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಸ್ಮರಿಸಿದರು. ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಸಲ್ಲಿಸಿ ಕಲಾಪವನ್ನು ಗುರುವಾರಕ್ಕೆ(ಫೆ.7) ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News