ಬಿಜೆಪಿಯನ್ನು ನಂಬಿದವರಿಗೆ ಕಾದಿದೆ ಪಶ್ಚಾತಾಪ: ಡಿ.ಕೆ.ಶಿವಕುಮಾರ್

Update: 2019-02-06 13:21 GMT

ಬೆಂಗಳೂರು, ಫೆ.6: ಬಿಜೆಪಿ ನಂಬಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿರುವವರು ಮುಂದೆ ಪಶ್ಚಾತಾಪ ಪಡುತ್ತಾರೆ ಎಂದು ಅತೃಪ್ತ ಶಾಸಕರಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನೇ ಆಟ ಆಡಿದರೂ ಸಮ್ಮಿಶ್ರ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅವರೂ ಪಶ್ಚಾತ್ತಾಪ ಪಡುತ್ತಾರೆ. ಅವರನ್ನು ನಂಬಿಕೊಂಡಿರುವವರೂ ಪಶ್ಚಾತ್ತಾಪ ಪಡುತ್ತಾರೆ. ಹಾಗೆ ನೋಡುತ್ತಾ ಇರಿ ಎಂದರು.

ಕಾಂಗ್ರೆಸ್ ಹೈಕಮಾಂಡ್ ಇದೆ. ಶಾಸಕಾಂಗ ಪಕ್ಷ ಇದೆ. ಜತೆಗೆ ಪಕ್ಷಾಂತರ ನಿಷೇಧ ಕಾಯಿದೆ ಇದೆ. ಪಕ್ಷಾಂತರಿಗಳಿಗೆ ಚೆನ್ನೈನ ಹೈಕೋರ್ಟ್ ಯಾವ ರೀತಿ ಪಾಠ ಕಲಿಸಿದೆ ಎಂಬುದು ಕಣ್ಣ ಮುಂದೆಯೇ ಇದೆ. ಹೀಗಾಗಿ ಕಾಂಗ್ರೆಸ್ ಶಾಸಕರು ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆಂದು ತಮಗೆ ಅನಿಸುವುದಿಲ್ಲ ಎಂದು ಅವರು ಹೇಳಿದರು.

ಬಿಜೆಪಿಯ ಮೂರ್ನಾಲ್ಕು ಶಾಸಕರು ಮುಂಬಯಿಯಲ್ಲಿ ಕುಳಿತುಕೊಂಡು ಆಪರೇಷನ್ ಕಮಲಕ್ಕೆ ವಿಫಲ ಯತ್ನ ನಡೆಸಿದ್ದಾರೆ. ತರಹೇವಾರಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅವರು ಒಂದಿಬ್ಬರು ಶಾಸಕರ ಸಂಪರ್ಕ ಸಾಧಿಸಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂಥ ಬೆಳವಣಿಗೆಯೇನೂ ನಡೆದಿಲ್ಲ. ಕಾಂಗ್ರೆಸ್ ಶಾಸಕರು ಪಕ್ಷದ ಜತೆ ಗಟ್ಟಿಯಾಗಿ ನಿಂತಿದ್ದಾರೆ. ಅವರು ಎಲ್ಲಿಗೂ ಹೋಗುವುದಿಲ್ಲ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಮಂಡಲದ ಜಂಟಿ ಅಧಿವೇಶನದ ಇತಿಹಾಸದಲ್ಲೆ ರಾಜ್ಯಪಾಲರಿಗೆ ಆಗೌರವ ತೋರಿಸಿದ ನಿದರ್ಶನ ಇಲ್ಲವೇ ಇಲ್ಲ. ರಾಜ್ಯಪಾಲರಿಗೆ ಅಗೌರವ ತೋರಿಸಿದ್ದು ಇದೇ ಮೊದಲು. ಬಿಜೆಪಿಯ ರಾಜಕೀಯ ಹತಾಶೆಯ ಪ್ರತೀಕವಿದು. ಬಿಜೆಪಿಯವರು ಇಂಥ ವರ್ತನೆಯಿಂದ ತಮ್ಮ ಗೌರವ ಕಳೆದುಕೊಳ್ಳುತ್ತಾರೆಯೇ ಹೊರತು ಅವರಿಗೆ ಬೇರಾವುದೇ ಪ್ರಯೋಜನ ಆಗುವುದಿಲ್ಲ ಎಂದು ಅವರು ಹೇಳಿದರು.

ಅಧಿಕಾರಕ್ಕಾಗಿ ಬಿಜೆಪಿಯವರು ಎಂಥ ನೀಚ ಕೆಲಸಕ್ಕೂ ಸಿದ್ಧ ಎಂಬುದು ಅವರ ವರ್ತನೆಯಿಂದ ದೃಢಪಡುತ್ತಿದೆ. ಕಾಂಗ್ರೆಸ್ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News