ಅಂತಿಮ ಆಯ್ಕೆ ಪಟ್ಟಿಗೆ ಕೆಪಿಎಸ್ಸಿ ಬಾಗಿಲು ತಟ್ಟಿದ ಆಕಾಂಕ್ಷಿಗಳು

Update: 2019-02-06 14:43 GMT

ಬೆಂಗಳೂರು, ಫೆ.6: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 643 ಮಹಿಳಾ ಮೇಲ್ವಿಚಾರಕಿಯರ ಹುದ್ದೆ ನೇಮಕಾತಿ ಸಂಬಂಧ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಕೆಪಿಎಸ್ಸಿ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಬುಧವಾರ ನಗರದ ವಿಧಾನಸೌಧ ಸಮೀಪದ ಕೆಪಿಎಸ್ಸಿ ಕೇಂದ್ರ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಜಮಾಯಿಸಿದ ಉದ್ಯೋಗ ಆಕಾಂಕ್ಷಿಗಳು, ಈ ಕೂಡಲೇ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 643 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು 2016ನೆ ಸಾಲಿನಲ್ಲಿ ಹೊರಡಿಸಲಾಗಿತ್ತು. ಬಳಿಕ ಇದೇ ಸಾಲಿನಲ್ಲಿ ಲಿಖಿತ ಪರೀಕ್ಷೆಯೂ ನಡೆಸಲಾಯಿತು. ತದನಂತರ ಎರಡು ವರ್ಷಗಳ ನಂತರ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 2018ನೆ ಸಾಲಿನಲ್ಲಿ ಪ್ರಕಟಿಸಿದರು. ಈ ಪಟ್ಟಿ ಬಂದು ಎರಡು ತಿಂಗಳು ಕಳೆದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾತ್ಕಾಲಿಕ ಆಯ್ಕೆಯಾಗಿರುವ ಅಭ್ಯರ್ಥಿಗಳು ದೂರವಾಣಿ ಮೂಲಕ ವಿಚಾರಿಸಿದಾಗ ಇಂದು, ನಾಳೆ ಪಟ್ಟಿ ಪ್ರಕಟಿಸುತ್ತೇವೆ ಎಂದೆಲ್ಲಾ ಹೇಳಿ, ಸಮಯ ವ್ಯರ್ಥ ಮಾಡಲಾಗುತ್ತಿದೆ. ಅದು ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ವಯೋಮಿತಿ ಹೆಚ್ಚು, ಕಡಿಮೆಯಾಗುವ ಆತಂಕದಲ್ಲಿದ್ದಾರೆ ಎಂದು ನುಡಿದರು.

ಕೆಪಿಎಸ್ಸಿ ನಿಯಮದ ಅನ್ವಯ ಗ್ರೂಪ್‌ ‘ಸಿ‘ ಹುದ್ದೆಗಳ ನೇಮಕಾತಿಯ ಅಧಿಸೂಚನೆ ಹೊರಡಿಸುವ 8 ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು. ಆದರೆ, ಮೂರು ವರ್ಷ ಕಳೆದರೂ ನೇಮಕಾತಿ ಆಗಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News