ನಿಮಗೆ ತಾಕತ್ತಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ: ಬಿಜೆಪಿಗೆ ಸಚಿವ ಕೃಷ್ಣಭೈರೇಗೌಡ ಸವಾಲು

Update: 2019-02-07 13:35 GMT

ಬೆಂಗಳೂರು, ಫೆ. 7: ‘ನೀರಿಲ್ಲದ ಬಾವಿಗೆ ಬಿದ್ದು ಒದ್ದಾಡುವ ಬದಲು ನಿಮಗೆ ತಾಕತ್ತು ಇದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ, ಏರಿದ ಧ್ವನಿಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ತಮ್ಮ ಹೆಸರಿನ ಕಾಗದ ಪತ್ರವನ್ನು ಸಭೆ ಮುಂದಿಟ್ಟ ಬಳಿಕ ಮಾತನಾಡಿದ ಕೃಷ್ಣಭೈರೇಗೌಡ, ‘ಧೈರ್ಯವಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ, ಹೀಗೆ ಸುಮ್ಮನೆ ನೀರಿಲ್ಲದ ಬಾವಿಗೆ ಬಿದ್ದು ಒದ್ದಾಡಬೇಡಿ’ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಇ.ತುಕಾರಾಂ, ಬಿಜೆಪಿಯವರು ಕಲಾಪದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಸರಕಾರದ ವಿರುದ್ಧ ಅವಿಶ್ವಾಸ ಮಂಡಿಸಲಿ. ಆಗ ನಮ್ಮ ಸರಕಾರಕ್ಕೆ ಬಹುಮತ ಇದೆಯೋ ಇಲ್ಲವೋ ಎಂಬುದು ಸಾಬೀತುಪಡಿಸುತ್ತೇವೆ ಎಂದರು.

ಇದನ್ನು ಲೆಕ್ಕಿಸದೆ ಬಿಜೆಪಿ ಸದಸ್ಯರು, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿ, ಸದನದಲ್ಲಿ ಗದ್ದಲ ಸೃಷ್ಟಿಸಿ ತಮ್ಮ ಧರಣಿ ಸತ್ಯಾಗ್ರಹವನ್ನು ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News