ಶುಕ್ರವಾರ ಮೈತ್ರಿ ಸರಕಾರದ ಮೊದಲ ಪರಿಪೂರ್ಣ ಬಜೆಟ್ ಮಂಡನೆ: ಸಿಎಂ ಕುಮಾರಸ್ವಾಮಿಗೆ ಅಗ್ನಿಪರೀಕ್ಷೆ

Update: 2019-02-07 13:40 GMT
ಫೈಲ್ ಚಿತ್ರ

ಬೆಂಗಳೂರು, ಫೆ.7: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೊದಲ ಪರಿಪೂರ್ಣ ಬಜೆಟ್ ಶುಕ್ರವಾರ ಮಧ್ಯಾಹ್ನ 12.32ಕ್ಕೆ ಮಂಡನೆಯಾಗಲಿದ್ದು, ರೈತರ ಸಾಲ ಮನ್ನಾ, ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರಾವರಿ, ಮೂಲಸೌಕರ್ಯ ಕ್ಷೇತ್ರಗಳಿಗೆ ಆದ್ಯತೆ ಸಿಗುವ ಸಾಧ್ಯತೆಗಳಿವೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯ ಸರಕಾರದ ಬಜೆಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ರಾಜ್ಯದ ಜನತೆಯೂ ಈ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಬಜೆಟ್ ಮಂಡನೆಗೆ ಪ್ರತಿಪಕ್ಷ ಬಿಜೆಪಿ ಎಲ್ಲಿ ಅಡ್ಡಗಾಲು ಹಾಕುತ್ತದೆಯೋ ಎಂಬ ಆತಂಕವು ಸರಕಾರದಲ್ಲಿದೆ.

ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ ಸದನವನ್ನು ಮೊಟಕುಗೊಳಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ನಾಳೆ ಮುಖ್ಯಮಂತ್ರಿ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸುತ್ತದೆಯೋ ಇಲ್ಲವೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕೆಲ ಶಾಸಕರು ಇನ್ನೂ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದು ಸರಕಾರದ ಭವಿಷ್ಯವನ್ನು ಡೋಲಾಯಮಾನವನ್ನಾಗಿಸಿದೆ.

ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಪೂರಕ ಬಜೆಟ್ ಮಂಡಿಸಿದ್ದ ಕುಮಾರಸ್ವಾಮಿ, ಪ್ರಮುಖವಾಗಿ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು. ಇದೀಗ ಮಂಡಿಸುತ್ತಿರುವ ಪರಿಪೂರ್ಣ ಬಜೆಟ್‌ನಲ್ಲಿ ಆಂತರಿಕ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ.

ರಾಜ್ಯದ ಎಲ್ಲ ಗ್ರಾಮಗಳಿಗೆ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಪೂರೈಸುವ 53 ಸಾವಿರ ಕೋಟಿ ರೂ.ಗಳ ‘ಜಲಧಾರೆ’ ಯೋಜನೆಯ ಅನುಷ್ಠಾನ, ಅಂತರ್ಜಲ ವೃದ್ಧಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿಯ ಕೃಷಿ ತಂತ್ರಜ್ಞಾನ ಅಳವಡಿಕೆ, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡುವ ಸಾಧ್ಯತೆಗಳು ಹೆಚಿವೆ.

ಹಿರಿಯ ನಾಗರಿಕರು, ವಿಕಲಚೇತನರು, ವಿಧವೆಯರು ಸೇರಿದಂತೆ ವಿವಿಧ ವರ್ಗಗಳಿಗೆ ನೀಡುತ್ತಿರುವ ಪಿಂಚಣಿ ಮೊತ್ತವನ್ನು ಹೆಚ್ಚಿಸುವುದು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವೇತನ ಪರಿಷ್ಕರಣೆ, ಕೃಷಿಕರಿಗೆ ವಿಶೇಷ ವಿಮಾ ಸೌಲಭ್ಯ ಸೇರಿದಂತೆ ಇನ್ನಿತರ ಜನಪ್ರಿಯ ಕಾರ್ಯಕ್ರಮಗಳ ಘೋಷಣೆ ಯಾಗುವ ನಿರೀಕ್ಷೆಯಿದೆ. ಔರಾದ್ಕರ್ ಸಮಿತಿಯ ಶಿಫಾರಸ್ಸಿನಂತೆ ಪೊಲೀಸ್ ಸಿಬ್ಬಂದಿಗಳ ವೇತನ, ಭತ್ತೆಗಳ ಪರಿಷ್ಕರಣೆ, ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಜಾರಿಗೆ ಬಂದಿದ್ದ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿಗೆ ಹೆಚ್ಚಿನ ಅನುದಾನ ಒದಗಿಸುವ ಸಾಧ್ಯತೆಗಳಿವೆ.

ಗ್ರಾಮೀಣ ಪ್ರದೇಶದಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ, ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ಹೊಸ ತಾಲೂಕುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ವಿಶೇಷ ಅನುದಾನ, ಹೊಸದಾಗಿ ಒಂದು ಸಾವಿರ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ, ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ, ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮಹತ್ವದ ಯೋಜನೆಗಳು ಪ್ರಕಟಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News