ಸಮ್ಮಿಶ್ರ ಸರಕಾರದ ಬಜೆಟ್‌ಗೆ ಜ್ಯೋತಿಷ್ಯದ ಅಭಯ: ಆರ್.ಅಶೋಕ್ ವ್ಯಂಗ್ಯ

Update: 2019-02-07 13:43 GMT

ಬೆಂಗಳೂರು, ಫೆ.7: ರಾಜಕೀಯ ಇತಿಹಾಸದಲ್ಲೇ ಮಧ್ಯಾಹ್ನ 12.32ಕ್ಕೆ ಬಜೆಟ್ ಮಂಡಿಸುವ ಉದಾಹರಣೆಗಳಿಲ್ಲ. ಸಚಿವ ಎಚ್.ಡಿ.ರೇವಣ್ಣ ಅವರ ಜ್ಯೋತಿಷ್ಯದ ಪ್ರಕಾರವಾಗಿಯೇ ಬಜೆಟ್ ಮಂಡಿಸಲು ಸಮಯ ನಿಗದಿ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಜ್ಯೋತಿಷ್ಯದ ಆಧಾರದಲ್ಲಿ ಬಜೆಟ್ ಮಂಡಿಸಲು ಹೊರಟಿದೆ. ನಮ್ಮದು ಜ್ಯೋತಿಷ್ಯ ನೋಡಿ ಬಜೆಟ್ ಮಂಡಿಸುವ ಪಕ್ಷವಲ್ಲವೆಂದು ತಿಳಿಸಿದರು.

ರಾಜ್ಯದ ಖಜಾನೆಯಲ್ಲಿ ದುಡ್ಡಿಲ್ಲ. ರೈತರ ಸಾಲಮನ್ನಾ ಮಾಡಿಲ್ಲ. ಇದರ ಮಧ್ಯೆ ಬಜೆಟ್ ಮಂಡನೆ ಮಾಡೋದರಲ್ಲಿ ಅರ್ಥವಿಲ್ಲ. ಈ ಬಗ್ಗೆ ಬಿಜೆಪಿ ಏನು ಮಾಡಬೇಕೆಂಬುನ್ನು ಮುಖಂಡರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಮ್ಮಿಶ್ರ ಸರಕಾರದ ನಾಯಕರಿಂದ ನಾವು ಬುದ್ಧಿ ಕಲಿಯುವ ಅಗತ್ಯವಿಲ್ಲ. ರಾಜ್ಯಪಾಲರ ಭಾಷಣದ ವಿರುದ್ಧ ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ, ನಾವು ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ನಾಯಕರು ಸದನದ ಬಾಗಿಲನ್ನು ಒದ್ದು ಗಲಾಟೆ ಮಾಡಲಿಲ್ಲವೇ ಎಂದು ಅವರು ಸಮರ್ಥಿಸಿಕೊಂಡರು. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಶಾಸಕರೆ ಆಗ್ರಹಿಸುತ್ತಿದ್ದಾರೆ. ನಾವು ಯಾರನ್ನು ಬಲವಂತವಾಗಿ ಕರೆದುಕೊಂಡು ಹೋಗುವ ಕೆಲಸ ಮಾಡಲ್ಲ. ಸಮ್ಮಿಶ್ರ ಸರಕಾರದ ಅಸ್ಥಿರವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಬಿಜೆಪಿ ತೀರ್ಮಾನ ಮಾಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News