ಬಹುಮತವಿಲ್ಲದ ಸರಕಾರಕ್ಕೆ ಕಲಾಪ ನಡೆಸಲು ಸಹಕಾರ ಕೊಟ್ಟಿಲ್ಲ: ಯಡಿಯೂರಪ್ಪ
ಬೆಂಗಳೂರು, ಫೆ.7: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಹುಮತ ಕಳೆದುಕೊಂಡಿದೆ. ಆದುದರಿಂದ, ನಾವು ಕಲಾಪ ನಡೆಸಲು ಸಹಕಾರ ಕೊಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ನ ಶಾಸಕರೇ ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿ ಅಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಬಹುಮತವಿಲ್ಲದ ಸರಕಾರಕ್ಕೆ ರಾಜ್ಯಪಾಲರಿಂದ ಭಾಷಣ ಮಾಡಿಸುವ ಹಕ್ಕಿಲ್ಲ ಎಂದರು.
ಮುಖ್ಯಮಂತ್ರಿ ಬಜೆಟ್ ಮಂಡನೆ ಮಾಡಿದ ಬಳಿಕ ಶಾಸಕರಿಗೆ ಬಜೆಟ್ ಪ್ರತಿಯನ್ನು ನೀಡುವ ಕುರಿತು ಕೈಗೊಂಡಿರುವ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಬಜೆಟ್ ಪ್ರತಿಗಳನ್ನು ಶಾಸಕರಿಗೆ ಹಾಗೂ ಮಾಧ್ಯಮದವರಿಗೆ ನೀಡಲಾಗುತ್ತಿತ್ತು. ಈಗ ನೋಡಿದರೆ, ಬಜೆಟ್ ಓದಿದ ನಂತರ ಪ್ರತಿ ನೀಡುವುದಾಗಿ ಹೇಳುತ್ತಿರುವುದು ಸರಿಯಲ್ಲ ಎಂದರು.
ಸರಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಸರಿಯಲ್ಲ. ಮುಖ್ಯಮಂತ್ರಿ ಬಜೆಟ್ ಮಂಡನೆ ಮಾಡುವಾಗ ಎಲ್ಲ ಶಾಸಕರಿಗೂ ಹಾಗೂ ಮಾಧ್ಯಮದವರಿಗೂ ಬಜೆಟ್ ಪ್ರತಿಗಳನ್ನು ಈ ಹಿಂದಿನಂತೆ ನೀಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.