ಮೋದಿ ಸರಕಾರದಿಂದ ದೇಶದ ಜನತೆಗೆ ತಪ್ಪು ಮಾಹಿತಿ: ದಿನೇಶ್ ಗುಂಡೂರಾವ್

Update: 2019-02-07 13:55 GMT

ಬೆಂಗಳೂರು, ಫೆ.7: ಕಳೆದ ನಲವತ್ತು ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಹೆಚ್ಚಾಗಿದೆ. ಆದರೂ ದೇಶದ ಜನತೆಗೆ ತಪ್ಪು ಅಂಕಿ ಅಂಶಗಳನ್ನು ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದರು.

ಗುರುವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಕೇಂದ್ರ ಸರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಎಫ್‌ಡಿಎ(ವಿದೇಶಿ ಹೂಡಿಕೆ) ಎಷ್ಟಾಗಿದೆ ಎಂದು ಬಹಿರಂಗ ಪಡಿಸಬೇಕು. ಆದರೆ, ಈ ಬಗ್ಗೆ ಯಾವುದೆ ಮಾಹಿತಿ ಕೊಡುತ್ತಿಲ್ಲ. ಇದು ಸೇರಿದಂತೆ ಯಾವುದೆ ಇಲಾಖೆಯಲ್ಲಿ ನಡೆಯುತ್ತಿರುವ ವಾಸ್ತವ ವಿಷಯಗಳನ್ನು ಹೇಳದೆ, ಕೇವಲ ಚುನಾವಣಾ ಭಾಷಣ ಮಾಡುತ್ತಾ ತಿರುಗಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕಳೆದ ಐದು ವರ್ಷಗಳಲ್ಲಿಯೆ ಕೇಂದ್ರ ಸರಕಾರ ಸಾಮಾನ್ಯ ಜನತೆಗೆ ಏನೇನು ಮಾಡಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹೇಳುತ್ತಲೆ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇವರ ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಬೇಕಾದರೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗುವ ಮೂಲಕ ಬಿಜೆಪಿಯ ಸುಳ್ಳನ್ನು ಬಯಲು ಮಾಡಬೇಕಿದೆ ಎಂದು ಅವರು ಹೇಳಿದರು.

 ಬೂತ್‌ಮಟ್ಟದಲ್ಲಿ ಪ್ರಚಾರ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿಯನ್ನು ಸೋಲಿಸುವುದಕ್ಕೆ ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಪಣ ತೊಡಬೇಕು. ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ನಾಯಕರು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಇಂದಿರಾ ಗಾಂಧಿ ಹಾಗೂ ರಾಜೀವ್‌ಗಾಂಧಿಯವರ ಮುಂದಾಲೋಚನೆಯ ಫಲವಾಗಿ ಇವತ್ತು ಭಾರತ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪ್ರಪಂಚದಲ್ಲಿಯೂ ಮುಂಚೂಣಿ ಸ್ಥಾನದಲ್ಲಿದೆ. ಆದರೆ, ಬಿಜೆಪಿ ಈ ಮಾಹಿತಿ ತಂತ್ರಜ್ಞಾನವನ್ನೆ ಬಳಸಿಕೊಂಡು ದೇಶವನ್ನು ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ಒಂದು ಸುಳ್ಳನ್ನು ನೂರು ಸಲ ಪುನರುಚ್ಚರಿಸುವ ಮೂಲಕ ಜನತೆಯ ತಲೆಯೊಳಗೆ ಸುಳ್ಳನ್ನೆ ಸತ್ಯವೆಂಬಂತೆ ಬಿಂಬಿಸಲು ಹೊರಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸತ್ಯವನ್ನು ಪ್ರಚಾರ ಮಾಡುವ ಮೂಲಕ ಬಿಜೆಪಿಯ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಬೇಕು ಎಂದು ಅವರು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಯಶೋಮತಿ ಠಾಕೂರ್ ಮಾತನಾಡಿ, ಧಾರ್ಮಿಕ ಶ್ರದ್ಧೆ ಎಂಬುದು ಪ್ರತಿಯೊಬ್ಬರ ಖಾಸಗಿ ವಿಚಾರ ಹಾಗೂ ನಂಬಿಕೆ. ಆದರೆ, ಬಿಜೆಪಿ ಅದನ್ನು ರಾಜಕೀಯಗೊಳಿಸಿ ಜನತೆಯ ಮನಸಿನಲ್ಲಿ ದ್ವೇಷ ಬಿತ್ತಲು ಹೊರಟಿದೆ. ಬಿಜೆಪಿ ಜನವಿರೋಧಿ ಚಿಂತನೆಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನತೆಯಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು. ಈ ವೇಳೆ ಕಾಂಗ್ರೆಸ್ ನಾಯಕ ನಾಗರಾಜ್ ಯಾದವ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜ್‌ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News