ವಂಶಪಾರಂಪರ್ಯದ ರಾಜಕಾರಣ ಮತ್ತು ಪ್ರಜಾತಂತ್ರ

Update: 2019-02-07 18:43 GMT

 ಕೌಟುಂಬಿಕ ಪ್ರಭಾವಳಿಯು ಒಂದು ನೈಜ ಪ್ರಜಾತಾಂತ್ರಿಕ ಆಚರಣೆಯೇ ಆಗಿರುವ ಸತ್ವವನ್ನು ನಿರಾಕರಿಸುವುದರಿಂದ ಅಂತಹ ಸ್ವಾಯತ್ತ ವ್ಯಕ್ತಿಗಳಿಗೆ ಕೌಟುಂಬಿಕ ಪ್ರಭಾವಳಿಯು ಒಂದು ಹೊರೆಯೇ ಆಗಿಬಿಡುತ್ತದೆ. ಆದರೆ ವಿರೋಧಿಯನ್ನು ಹಣಿಯಲು ಆ ವ್ಯಕ್ತಿಯ ವಂಶಹಿನ್ನೆಲೆಯನ್ನು ಮಾತ್ರ ಗುರಿಮಾಡಿಕೊಳ್ಳುವ ರಾಜಕೀಯವು ಸಮರ್ಥ ವ್ಯಕ್ತಿಯೊಬ್ಬರು ತಮ್ಮ ಕೌಟುಂಬಿಕ ಹಿನ್ನೆಲೆಯನ್ನು ಹಿಂದಿಕ್ಕಿ ಒಂದು ನಿಜವಾದ ಸ್ಪರ್ಧಾ ಮನೋಭಾವದಿಂದ ರಾಜಕೀಯಕ್ಕೆ ಪ್ರವೇಶ ಮಾಡುವುದನ್ನೂ ನಿಷೇಧಿಸುತ್ತದೆ.


ಭಾರತದಲ್ಲಿ ಒಂದು ರಾಜಕೀಯ ಕುಟುಂಬದ ಹೊಸ ಸದಸ್ಯರು ಅದರಲ್ಲೂ ನಿರ್ದಿಷ್ಟವಾಗಿ ನೆಹರೂ-ಗಾಂಧಿ ಕುಟುಂಬದ ಸದಸ್ಯರು ರಾಜಕೀಯಕ್ಕೆ ಹೊಸದಾಗಿ ಪ್ರವೇಶಿಸಿದಾಗಲೆಲ್ಲಾ ವಂಶಪಾರಂಪರ್ಯ ರಾಜಕಾರಣದ ಬಗೆಗಿನ ರಾಜಕೀಯ ವಾಗ್ವಾದಗಳು ಹೊಸ ಜೀವವನ್ನು ಪಡೆದುಕೊಳ್ಳುತ್ತವೆ. ಹೀಗಾಗಿ ಪೂರ್ವ ಉತ್ತರಪ್ರದೇಶದ ಉಸ್ತುವಾರಿಯಾಗಿಯೂ ಮತ್ತು ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿಯೂ ಪ್ರಿಯಾಂಕಾ ಗಾಂಧಿ ವಾದ್ರ ಅವರ ನೇಮಕಾತಿಯಾದ ಆನಂತರ ಪ್ರಧಾನಿಯವರನ್ನೂ ಒಳಗೊಂಡಂತೆ ಬಿಜೆಪಿಯ ಸದಸ್ಯರೆಲ್ಲಾ ಎಬ್ಬಿಸಿದ ಹುಯಿಲೂ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಒಂದು ವಿಶೇಷ ಅನುಕೂಲಸ್ಥ ಕುಟುಂಬದ ಹಿನ್ನೆಲೆಯುಳ್ಳ ವ್ಯಕ್ತಿಯು ರಾಜಕೀಯಕ್ಕೆ ಪ್ರವೇಶಿಸಿದಾಗಲೆಲ್ಲಾ ಈ ವಾಗ್ವಾದಗಳು ಜೀವ ಪಡೆಯುತ್ತವೆ. ಮೇಲ್ನೋಟಕ್ಕೆ ಇವೆಲ್ಲವೂ ಒಂದು ಆದರ್ಶಯುತವಾದ ಪ್ರಜಾತಂತ್ರಕ್ಕಾಗಿ ನಡೆಯುವ ವಾಗ್ವಾದಗಳೆನಿಸಿದರೂ ಅವುಗಳ ಪರಿಣಾಮವು ಮಾತ್ರ ಆ ದಿಕ್ಕಿನೆಡೆ ಇರುವುದಿಲ್ಲ. ಏಕೆಂದರೆ ಈ ವಾಗ್ವಾದಗಳಲ್ಲಿ ಯಾವುದೇ ಬಗೆಯ ಪ್ರಾಮಾಣಿಕತೆಯಿರುವುದಿಲ್ಲ. ಯಥಾಪ್ರಕಾರ ಬಿಜೆಪಿಯ ವಕ್ತಾರರು ಒಂದು ಆದರ್ಶಯುತ ಪ್ರಜಾತಂತ್ರಕ್ಕೆ ಬೇಕಿಲ್ಲದ ವಂಶಪಾರಂಪರ್ಯ ರಾಜಕಾರಣದ ಚರ್ಚೆಗಳು ತನ್ನ ಪಕ್ಷದ ಪರಿಧಿಯೊಳಗೆ ಕಾಲಿಡಲು ಬಿಡಲಿಲ್ಲ. ಆದರೆ ಆ ಪಕ್ಷದ ವಂಶಪಾರಂಪರ್ಯ ರಾಜಕೀಯದ ನಡಾವಳಿಗಳು ಸಹ ಪ್ರಜಾತಂತ್ರದ ಈ ವಿಪರ್ಯಾಸದ ಪುನರುತ್ಪಾದನೆಗೆ ಸಹಕರಿಸುತ್ತವೆ. ಹೀಗಾಗಿ ಕಾಂಗ್ರೆಸ್‌ನ ವಂಶಪಾರಂಪರ್ಯ ರಾಜಕಾರಣವನ್ನು ಟೀಕಿಸುವ ಬಿಜೆಪಿ ತನ್ನ ವಂಶಪಾರಂಪರ್ಯ ರಾಜಕಾರಣವು ಕಾಂಗ್ರೆಸ್‌ಗಿಂತ ಹೇಗೆ ಗುಣಾತ್ಮಕವಾಗಿ ಶ್ರೇಷ್ಠವೆಂದು ವಿವರಿಸುವ ಗೋಜಿಗೇ ಹೋಗುವುದಿಲ್ಲ.

ಈ ವಿಷಯದ ಬಗ್ಗೆ ಬಿಜೆಪಿಯ ಪ್ರತಿಕ್ರಿಯೆ ಕೇವಲ ಆಷಾಢಭೂತಿತನದಿಂದ ಮಾತ್ರ ಕೂಡಿಲ್ಲ. ಬದಲಿಗೆ ಅವಿವೇಕತನದಿಂದಲೂ ಕೂಡಿದೆ. ವಂಶಪಾರಂಪರ್ಯ ರಾಜಕಾರಣವನ್ನು ಈ ಬಗೆಯಲ್ಲಿ ರಾಜಕೀಯಕರಣಗೊಳಿಸುವುದು ಪ್ರಜಾತಂತ್ರದ ಮೂಲಭೂತ ತತ್ವಗಳಾದ ಸಮಾನತೆ ಮತ್ತು ನ್ಯಾಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನುಂಟು ಮಾಡಬಹುದು ಎಂಬುದನ್ನು ಅವರು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಪ್ರಜ್ಞಾವಂತ ನಾಗರಿಕ ವ್ಯಕ್ತಿಗಳನ್ನು ಸಂಪ್ರದಾಯ ಶರಣತೆಯಿಂದ ಕ್ರಾಂತಿಕಾರಕವಾಗಿ ಬೇರ್ಪಡಿಸಿ ನೋಡುವ ಮೂಲಕ ಮತ್ತು ಅವರ ಕೌಟುಂಬಿಕ ಹಿನ್ನೆಲೆಯನ್ನು ಲೆಕ್ಕಕ್ಕಿಡದ ಮೂಲಕ ಪ್ರಜಾತಂತ್ರವು ತನ್ನ ಆದರ್ಶವಾದಿ ಧೋರಣೆಯನ್ನು ಪಡೆದುಕೊಳ್ಳುತ್ತದೆ. ಸಾರ್ವಜನಿಕ ಉದ್ದೇಶಗಳಿಗೆ ಬದ್ಧರಾಗಿರುವ ನಾಗರಿಕ ಅಥವಾ ಪ್ರಜಾತಾಂತ್ರಿಕ ಅಧಿಕಾರ ವ್ಯಾಪ್ತಿಯೊಳಗೆ ಅವಕಾಶ ಪಡೆದುಕೊಳ್ಳುವ ಪ್ರಜ್ಞಾವಂತ ನಾಗರಿಕರೊಬ್ಬರು ತಮ್ಮ ಅತ್ಯುತ್ತಮವಾದುದನ್ನು ಒಂದು ಸಾರ್ವಜನಿಕ ಸರಕಾಗಿ ಕೊಡಮಾಡಲು ಜಾತಿ, ಧರ್ಮ ಅಥವಾ ಕೌಟುಂಬಿಕ ಪ್ರಭಾವಳಿಯನ್ನು ಆಧರಿಸಲು ನಿರಾಕರಿಸುತ್ತಾರೆ. ಏಕೆಂದರೆ ಅದು ಭೌತಿಕ ಸಂಪತ್ತು, ರಾಜಕೀಯ ಸಂಪರ್ಕ ಮತ್ತು ಪಕ್ಷದ ಕಾರ್ಯಕರ್ತರನ್ನೂ ಒಳಗೊಂಡಂತೆ ಮಾನವ ಸಂಪನ್ಮೂಲಗಳ ಸಂಗ್ರಹದಿಂದ ಪಡೆದುಕೊಂಡಿರುವ ಸವಲತ್ತಾಗಿರುತ್ತದೆ.

ಕೌಟುಂಬಿಕ ಪ್ರಭಾವಳಿಯು ಒಂದು ನೈಜ ಪ್ರಜಾತಾಂತ್ರಿಕ ಆಚರಣೆಯೇ ಆಗಿರುವ ಸತ್ವವನ್ನು ನಿರಾಕರಿಸುವುದರಿಂದ ಅಂತಹ ಸ್ವಾಯತ್ತ ವ್ಯಕ್ತಿಗಳಿಗೆ ಕೌಟುಂಬಿಕ ಪ್ರಭಾವಳಿಯು ಒಂದು ಹೊರೆಯೇ ಆಗಿಬಿಡುತ್ತದೆ. ಆದರೆ ವಿರೋಧಿಯನ್ನು ಹಣಿಯಲು ಆ ವ್ಯಕ್ತಿಯ ವಂಶಹಿನ್ನೆಲೆಯನ್ನು ಮಾತ್ರ ಗುರಿಮಾಡಿಕೊಳ್ಳುವ ರಾಜಕೀಯವು ಸಮರ್ಥ ವ್ಯಕ್ತಿಯೊಬ್ಬರು ತಮ್ಮ ಕೌಟುಂಬಿಕ ಹಿನ್ನೆಲೆಯನ್ನು ಹಿಂದಿಕ್ಕಿ ಒಂದು ನಿಜವಾದ ಸ್ಪರ್ಧಾ ಮನೋಭಾವದಿಂದ ರಾಜಕೀಯಕ್ಕೆ ಪ್ರವೇಶ ಮಾಡುವುದನ್ನೂ ನಿಷೇಧಿಸುತ್ತದೆ. ಇಂದಿನ ಚುನಾವಣಾ ರಾಜಕಾರಣದಲ್ಲಿ ಯಶಸ್ವಿ ರಾಜಕಾರಣಿಯಾಗಲು ಅನುಕೂಲಸ್ಥ ರಾಜಕೀಯ ಕುಟುಂಬಗಳೇ ಪ್ರಮುಖ ಮಾದರಿಗಳಾಗಿಬಿಟ್ಟಿವೆ. ಚುನಾವಣಾ ಪ್ರಜಾತಂತ್ರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಥವಾ ನಿಯಂತ್ರಿಸುವ ಅಧಿಕಾರ ಕೇಂದ್ರಗಳ ಮೇಲೆ ನಿರ್ದಿಷ್ಟ ಕುಟುಂಬಗಳು ಅಥವಾ ಅದರ ವಿಸ್ತೃತ ಪರಿವಾರಗಳಿಗೆ ವಿಶೇಷ ಪ್ರಭಾವವಿರುತ್ತದೆ. ಚುನಾವಣಾ ಮುನ್ನಾ ದಿನಗಳಲ್ಲಿ ಹಾಗೂ ಚುನಾವಣಾ ಸಮಯದಲ್ಲಿ ಸ್ಥಾನಗಳ ವಿತರಣೆಯಲ್ಲಿ ಇಂಥಾ ಕುಟುಂಬಗಳು ನಿಯಂತ್ರಣ ಸಾಧಿಸುತ್ತವೆ. ಪಕ್ಷದ ಶಾಸಕರ ಮೇಲೆ ತಮ್ಮ ಪರೋಕ್ಷ ಅಧಿಕಾರವನ್ನು ಚಲಾಯಿಸುತ್ತಾ ಇಂತಹ ಕುಟುಂಬಗಳು ಸಂಪೂರ್ಣ ಅಧಿಕಾರವನ್ನು ನಡೆಸುತ್ತಿರುತ್ತವೆ. ತಮ್ಮ ಸೂಚನೆಯನ್ನು ಕಾರ್ಯಗತಗೊಳಿಸದ ಶಾಸಕರ ಮೇಲೆ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಥವಾ ಪಕ್ಷದಲ್ಲಿನ ಸಾರ್ವಜನಿಕ ಅಧಿಕಾರ ಸ್ಥಾನಗಳಲ್ಲಿನ ಉನ್ನತ ಹುದ್ದೆಗಳಿಗೆ ಇತರೇ ಶಾಸಕರನ್ನು ನೇಮಕ ಮಾಡುವ ಮೂಲಕ ಅವರು ತಮ್ಮ ಅಧಿಕಾರವನ್ನು ಚಲಾಯಿಸುತ್ತಿರುತ್ತಾರೆ. ಒಂದು ಉಪಮೆಯಲ್ಲಿ ಹೇಳುವುದಾದರೆ ಇಂತಹ ಅನುಕೂಲಸ್ಥರ ಸೌಲಭ್ಯಗಳು ಬಿಲಿಯರ್ಡ್ಸ್ ಆಟದಲ್ಲಿ ಬಾಲುಗಳನ್ನು ಬೋರ್ಡಿನ ರಂಧ್ರಗಳಿಗೆ ತಳ್ಳುವ ಕ್ಯೂ ಸ್ಟಿಕ್ (ತಳ್ಳುಕೋಲು) ತರ ಇರುತ್ತವೆ.

ಆದರೆ ಅಧಿಕಾರವು ಅಷ್ಟು ಸರಾಗವಾಗಿಯೇನೂ ಹರಿದುಬಿಡುವುದಿಲ್ಲ. ಒಬ್ಬ ವ್ಯಕ್ತಿಯು ಆ ಕುಟುಂಬಕ್ಕೆ ಎಷ್ಟು ನಿಷ್ಠೆಯನ್ನು ತೋರಿಸಿದ್ದಾನೆ ಎಂಬುದನ್ನು ಆಧರಿಸಿ ಅಧಿಕಾರ ದಕ್ಕುತ್ತದೆಯೇ ವಿನಃ ಆಯಾ ವ್ಯಕ್ತಿಗಳ ಸಾಮರ್ಥ್ಯಕ್ಕೆ ಅಲ್ಲಿ ಯಾವ ಮಹತ್ವವೂ ಇರುವುದಿಲ್ಲ. ಇದು ಒಂದು ಹೊಸ ಬಗೆಯ ಊಳಿಗಮಾನ್ಯತೆಯಾಗಿದ್ದು, ಒಂದು ಆದರ್ಶವಾದಿ ಪ್ರಜಾತಂತ್ರದ ಸ್ಫೂರ್ತಿಗೆ ವಿರುದ್ಧವಾಗಿರುವ ಇಂತಹ ಆಚರಣೆಗಳಿಗೆ ಯಾರು ಬಲಿಯಾಗಿದ್ದರೋ ಅವರೂ ಕೂಡಾ ಇದೇ ರಾಜಕೀಯವನ್ನು ಮುಂದುವರಿಸುತ್ತಿರುವುದು ಒಂದು ವಿಪರ್ಯಾಸವಾಗಿದೆ. ಹೀಗಾಗಿಯೇ, ಕೆಲವು ದಲಿತ ಮತ್ತು ಆದಿವಾಸಿ ಕುಟುಂಬಗಳು ಸಹ ಇಂತಹ ವಂಶಪಾರಂಪರ್ಯ ರಾಜಕಾರಣದ ಆಶೋತ್ತರಗಳನ್ನು ಬೆಳೆಸಿಕೊಂಡಿದ್ದು ತಮ್ಮ ಕುಟುಂಬದವರನ್ನೇ ತಮ್ಮ ಪಕ್ಷದ ವಾರಸುದಾರರನ್ನಾಗಿ ನೇಮಕ ಮಾಡುತ್ತಿದ್ದಾರೆ. ಹೀಗೆ ಕೆಲವು ದಲಿತ ಮತ್ತು ಆದಿವಾಸಿ ಕುಟುಂಬಗಳೂ ಸಹ ತಮ್ಮತಮ್ಮ ಕುಟುಂಬದ ಮೂಲಕವೇ ಚುನಾವಣಾ ರಾಜಕಾರಣ ಮುಂದುವರಿಸುವ ಬಗ್ಗೆ ಗಂಭೀರವಾಗಿ ಅಲೋಚಿಸುತ್ತಿರುವುದು ಭಾರತದ ಪ್ರಜಾತಂತ್ರದಲ್ಲಿ ರಾಜಕೀಯ ಅಧಿಕಾರವು ವಂಶಾಧಾರಿತವಾಗಿ ರೂಪುಗೊಳ್ಳುತ್ತಿರುವುದು ಒಂದು ಸಾಮಾನ್ಯ ವಿದ್ಯಮಾನವಾಗುತ್ತಿರುವುದನ್ನು ಹಾಗೂ ಅಧಿಕಾರದಲ್ಲುಳಿಯುವುದೇ ಒಂದು ರಾಜಕೀಯ ತತ್ವವಾಗಿಬಿಡುವ ಅಪಾಯವನ್ನೂ ಸೂಚಿಸುತ್ತಿದೆ.

ಈ ತತ್ವದ ಬೇರುಗಳು ಪ್ರಜಾತಂತ್ರ ಪೂರ್ವ ಸಮಾಜದಲ್ಲಿದೆ. ಅಂತಹ ಸಮಾಜಗಳಲ್ಲಿ ವಂಶಪಾರಂಪರ್ಯವಾಗಿಯೇ ಅಧಿಕಾರದ ವಾರಸಿಕೆಯೂ ಹರಿಯುತ್ತಿತ್ತು ಮತ್ತು ಮುಂದಿನ ದೊರೆ ಯಾರೆಂಬುದು ಪೂರ್ವ ನಿರ್ಧಾರಿತವಾಗಿರುತ್ತಿತ್ತು. ಆ ನಂತರದಲ್ಲಿ ಅನುಚರರ ನಿಷ್ಠತೆಯ ಮೂಲಕ ಆ ತೀರ್ಮಾನಗಳಿಗೆ ಮಾನ್ಯತೆ ದೊರಕುತ್ತಿತ್ತು. ಚುನಾವಣಾ ಪ್ರಜಾತಂತ್ರಗಳಲ್ಲೂ ರಾಜಕೀಯ ವಾರಸಿಕೆಯನ್ನು ಕೌಟುಂಬಿಕವಾಗಿ ನಿಯಂತ್ರುಣಗೊಳ್ಳುತ್ತಿರುವುದು ಅಧಿಕಾರದಲ್ಲುಳಿಯುವ ತತ್ವಕ್ಕೆ ಸಮೀಪವಾಗಿದೆ. ಹಾಗಿದ್ದಲ್ಲಿ ಚುನಾವಣಾ ಅವಕಾಶಗಳನ್ನು ಪ್ರಜಾತಂತ್ರೀಕರಿಸಲು ಅದನ್ನು ಬೇರುಬಿಟ್ಟಿರುವ ಕೌಟುಂಬಿಕ ಹಿಡಿತದಿಂದ ಹೇಗೆ ಮುಕ್ತಗೊಳಿಸಬಹುದು? ಈ ನಿಟ್ಟಿನಲ್ಲಿ ಈ ಹಿಂದೆಯೂ ಕೆಲವು ಪ್ರಯತ್ನಗಳನ್ನು ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮಹಿಳೆಯರನ್ನು ಸಬಲೀಕರಿಸುವ ನಿಟ್ಟಿನಲ್ಲಿ ಜಾರಿಯಾದ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಗಳು ರಾಜಕೀಯದಲ್ಲಿ ಕುಟುಂಬದ ಹಿಡಿತ ವನ್ನು ಸಡಿಲಗೊಳಿಸುವೆಡೆಗೆ ಇಟ್ಟ ಹೆಜ್ಜೆಯಾಗಿತ್ತು. ಆದರೆ ಪಿತೃಸ್ವಾಮ್ಯ ಕುಟುಂಬಗಳು ರಾಜಕೀಯದ ಮೇಲೆ ತಮ್ಮ ಅಧಿಕಾರವನ್ನು ಪುನರ್ ಸ್ಥಾಪಿಸಿಸುವ ದಾರಿಗಳನ್ನು ಹುಡುಕಿಕೊಳ್ಳುತ್ತವೆ. ಪ್ರಜಾತಂತ್ರದ ಬಗೆಗೆ ಅರಿಸ್ಟಾಟಲ್‌ನ ‘‘ಈಗ ನಾನು ಆಳುತ್ತೇನೆ ನಂತರ ಆಳಿಸಿಕೊಳ್ಳುತ್ತೇನೆ’’ ಎಂಬ ತತ್ವವು ಸಹ ಈ ಮಹಿಳೆಯರ ಕುಟುಂಬದವರನ್ನು ತಮಗಿಂತ ಸೌಲಭ್ಯಹೀನರ ಪರವಾಗಿ ಅಧಿಕಾರವನ್ನು ಬಿಟ್ಟುಕೊಡುವಂತೆ ಮನವರಿಕೆ ಮಾಡಿಸುವುದಿಲ್ಲ. ಬದಲಿಗೆ ಅವರು ನಮ್ಮ ಕುಟುಂಬವು ಆಳ್ವಿಕೆ ಮಾಡುತ್ತದೆ ಮತ್ತು ಆಳ್ವಿಕೆ ಮಾಡುತ್ತಲೇ ಇರುತ್ತದೆ ಅಥವಾ ಯಾರಿಂದಲೂ ನಾವು ಆಳಿಸಿಕೊಳ್ಳಲ್ಪಡುವುದಿಲ್ಲ ಎಂಬ ವಂಶಪಾರಂಪರ್ಯ ತತ್ವವನ್ನೇ ಅನುಸರಿಸುತ್ತವೆ. ಇಂತಹ ಹತಾಶ ಸಂದರ್ಭದಲ್ಲಿ ವಂಶಪಾರಂಪರ್ಯ ಆಳ್ವಿಕೆೆಯನ್ನು ದುರ್ಬಲಗೊಳಿಸಿ ಸಮಾನತೆ ಮತ್ತು ನ್ಯಾಯಗಳೆಂಬ ಪ್ರಜಾತಂತ್ರದ ಎರಡು ಮುಖ್ಯ ತತ್ವಗಳು ಪುನರ್ ಸ್ಥಾಪನೆಗೊಳ್ಳುವ ರೀತಿಯಲ್ಲಿ ಸಾಮಾನ್ಯ ಮತದಾರರು ತಮ್ಮ ವಿವೇಚನೆಯನ್ನು ಬಳಸಿಕೊಳ್ಳಬೇಕಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News