ಪುಸ್ತಕ ಮಾರಾಟದಲ್ಲಿ ಶಿಸ್ತು, ಪ್ರೀತಿ ಬೇಕು: ಚಂದ್ರಶೇಖರ ಕಂಬಾರ

Update: 2019-02-08 11:59 GMT

ಬೆಂಗಳೂರು, ಫೆ.8: ಪುಸ್ತಕಗಳ ಮಾರಾಟದಲ್ಲಿ ಶಿಸ್ತು, ಪ್ರೀತಿಯಿದ್ದರೆ ಮಾತ್ರ ಓದುಗರನ್ನು ಪುಸ್ತಕ ಕೊಂಡುಕೊಳ್ಳುವಂತೆ ಪ್ರೇರೇಪಿಸಲು ಸಾಧ್ಯವಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದರು.

ಶುಕ್ರವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಮಾರಾಟಕ್ಕಾಗಿ ಮಳಿಗೆಗಳನ್ನು ತೆರೆದರೆ ಸಾಲದು, ಓದುಗರನ್ನು ಪುಸ್ತಕಗಳತ್ತ ಆಕರ್ಷಿಸುವಂತಹ ವಾತಾವರಣ ನಿರ್ಮಿಸಬೇಕೆಂದು ತಿಳಿಸಿದರು.

ಕನ್ನಡ ಪುಸ್ತಕಗಳು ಗುಣಮಟ್ಟದಲ್ಲಿ ಯಾವುದೆ ದೇಶದ ಪುಸ್ತಕಗಳಿಗಿಂತಲೂ ಕಡಿಮೆಯಿಲ್ಲ. ಆದರೆ, ಪುಸ್ತಕಗಳನ್ನು ಚೆಂದ ಕಾಣಿಸುವ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಆಗಬೇಕಿದೆ. ಒಟ್ಟಾರೆ ಕನ್ನಡ ಪುಸ್ತಕ ಕ್ಷೇತ್ರವನ್ನು ರಾಜ್ಯದ ಪ್ರತಿಯೊಬ್ಬ ಕನ್ನಡಿಗನ ಮನೆ-ಮನಗಳಿಗೆ ತಲುಪಿಸಲು ಕನ್ನಡ ಪುಸ್ತಕ ಪ್ರಾಧಿಕಾರ ವಿಶೇಷ ಆಸಕ್ತಿ ವಹಿಸುತ್ತಿರುವುದು ಶ್ಲಾಘನೀಯವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ರಾಜ್ಯದಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಮುಖ್ಯವಾಗಿ ಪ್ರಕಾಶಕರು-ಲೇಖಕರು -ಓದುಗರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮಕ್ಕಳಿಗೆ ಅಚ್ಚುಮೆಚ್ಚಿನ ಪುಸ್ತಕ, ಕಾಲೇಜು ವಿದ್ಯಾರ್ಥಿಗಳಿಗೆ ಜಾಣಜಾಣೆಯರ ಪುಸ್ತಕ ಎಂಬ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಪುಸ್ತಕ ಕುರಿತು ಆಸಕ್ತಿ ಮೂಡಿಸಲಾಗುತ್ತಿದೆ. ಹಾಗೂ ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ಮೊದಲ ಪುಸ್ತಕಕ್ಕೆ 15 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, ಇಂದಿನ ಯುವ ಜನತೆ ಪುಸ್ತಕಗಳಿಂದ ದೂರ ಹೋಗಿದ್ದಾರೆ. ಅವರಿಗೆ ಪುಸ್ತಕದ ರುಚಿ ಏನೆಂದು ಗೊತ್ತಿಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಪುಸ್ತಕ ಮೇಳಕ್ಕೆ ಕರೆತಂದು, ಪುಸ್ತಕದ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು. ಈ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ಮಂಗಳೂರು, ಕಲಬುರ್ಗಿ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳು ಪುಸ್ತಕ ಮಾರಾಟ ಮೇಳವನ್ನು ಆಯೋಜಿಸಲು ಪುಸ್ತಕ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ. ಒಟ್ಟಾರೆ, ಪ್ರತಿಯೊಬ್ಬ ಕನ್ನಡಿಗೆ ಮನಸಿನಲ್ಲಿ ಪುಸ್ತಕಗಳ ಕುರಿತು ಆಸಕ್ತಿ ಉಂಟು ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ.

-ವಸುಂಧರಾ ಭೂಪತಿ, ಅಧ್ಯಕ್ಷೆ ಕನ್ನಡ ಪುಸ್ತಕ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News