ಸ್ಪೀಕರ್ ರಮೇಶ್‌ ಕುಮಾರ್‌ಗೆ ಸಿಎಂ ಕುಮಾರಸ್ವಾಮಿ ಪತ್ರ

Update: 2019-02-08 15:20 GMT

ಬೆಂಗಳೂರು, ಫೆ.8: ರಾಜ್ಯ ವಿಧಾನಸಭೆಗೆ ತನ್ನದೇ ಆದ ವಿಶಿಷ್ಟ ಪರಂಪರೆ ಹಾಗೂ ಪಾವಿತ್ರವಿದೆ. ಈ ಸಭೆಯ ಸಭಾಧ್ಯಕ್ಷರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯ ವಿಧಾನಸಭೆಯ ನಡಾವಳಿಗಳು ನನಗೆ ಅತ್ಯಂತ ನೋವು ತಂದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್‌ಗೆ ಪತ್ರ ಬರೆದಿರುವ ಅವರು, ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ, ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ನಡೆದುಕೊಂಡ ರೀತಿಯು ಸದನದ ಪರಂಪರೆಗೆ ಒಂದು ಕಪ್ಪು ಚುಕ್ಕೆ ಎಂಬುದು ನನ್ನ ಭಾವನೆ. ತಮ್ಮ ಆದೇಶಗಳನ್ನು ಧಿಕ್ಕರಿಸಿ, ಸದನದಲ್ಲಿ ಅವರು ನಡೆದುಕೊಂಡ ರೀತಿ ರಾಜ್ಯ ವಿಧಾನಸಭೆಯ ಪಾವಿತ್ರತೆಗೆ ಭಂಗ ತಂದಂತಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆಯ ಎಲ್ಲ ಸದಸ್ಯರನ್ನು ತಾವು ಅತ್ಯಂತ ಅಭಿಮಾನದಿಂದ ಕಂಡು, ಎಲ್ಲರಿಗೂ ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡುವ ಮೂಲಕ ನಮ್ಮೆಲ್ಲರಿಗೂ ಆದರ್ಶನೀಯರಾಗಿದ್ದೀರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಫೆ.7ರಂದು ನಡೆದಿರುವ ಒಂದು ವಿದ್ಯಾಮಾನ ಅತ್ಯಂತ ವಿಷಾದನೀಯ. ನಮ್ಮ ಪಕ್ಷದ ಗುರುಮಿಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರು, ಇವರ ಪುತ್ರ ಶರಣಗೌಡರನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕರ ಪರವಾಗಿ ದೂರವಾಣಿಯ ಮೂಲಕ ಸಂಪರ್ಕಿಸಿ, ದೇವದರ್ಗುದಲ್ಲಿರುವ ಸರಕಾರಿ ಅತಿಥಿಗೃಹಕ್ಕೆ ಆಹ್ವಾನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕರು ಖುದ್ದಾಗಿ ಹಾಜರಿದ್ದು, ನಾಗನಗೌಡ ಕಂದಕೂರುರವರಿಂದ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸುವಂತೆ ಪ್ರಚೋದನೆ ಮಾಡಿದ್ದಾರೆ. ರಾಜೀನಾಮೆಗೆ ಪೂರಕವಾಗಿ ಆಮಿಷಗಳನ್ನು ಒಡ್ಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ವೇಳೆ ಪ್ರತಿಪಕ್ಷದ ನಾಯಕ ಹಾಗೂ ಅವರ ಜೊತೆಯಲ್ಲಿದ್ದ ದೇವದುರ್ಗದ ಶಾಸಕ ಶಿವನಗೌಡ ನಾಯಕ್, ಅತ್ಯಂತ ಆಕ್ಷೇಪಾರ್ಹ ಮಾತುಗಳನ್ನು ಬಳಸಿದ್ದು, ತಮ್ಮ ಸ್ಥಾನಮಾನದ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಹಾಸನದ ಶಾಸಕ ಪ್ರೀತಂ ಗೌಡ ಹಾಜರಿದ್ದರು ಎಂದು ಅವರು ತಿಳಿಸಿದ್ದಾರೆ.

ಅವರ ಮಾತುಗಳು ನನಗೆ ವೈಯಕ್ತಿಕವಾಗಿ ಅತ್ಯಂತ ನೋವು ಉಂಟು ಮಾಡಿದೆ. ರಾಜ್ಯ ವಿಧಾನಸಭೆಯ ಸದಸ್ಯರೊಬ್ಬರು ಸಭಾಧ್ಯಕ್ಷರ ಬಗ್ಗೆ ಈ ರೀತಿ ಮಾತನಾಡಿದ್ದಾರೆ ಎಂಬುದು ಊಹೆಗೂ ನಿಲುಕದ್ದು. ಅವರು ಮಾತನಾಡಿರುವ ಧ್ವನಿ ಸುರುಳಿಯನ್ನು ತಮ್ಮ ಆದ್ಯ ಗಮನಕ್ಕೆ ಕಳುಹಿಸುತ್ತಿದ್ದು, ಅದನ್ನು ಆಲಿಸಿ, ವಿಧಾನಸಭೆಯ ನಿಯಮಾನುಸಾರ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News