ಸರಕಾರವೇ ಉಳಿಸಲಿ..!

Update: 2019-02-08 18:32 GMT

ಮಾನ್ಯರೇ,

ರಾಜ್ಯದಲ್ಲಿರುವ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇರುವ ಆತಂಕಕಾರಿ ವಿಚಾರ ಬಯಲಾಗಿದೆ. ಈ ಮೂಲಕ ಬಡವರ ಪಾಲಿನ ವಿದ್ಯಾ ದೇಗುಲ ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿದೆ. ಇಂತಹ ಪರಿಸ್ಥಿತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವುದು ಕೂಡಾ ಮತ್ತಷ್ಟು ಆತಂಕ ಸೃಷ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ 16 ವಿದ್ಯಾರ್ಥಿಗಳಿದ್ದಾರೆ. ಈ ಶಾಲೆ ಮುಚ್ಚುವ ಸಾಧ್ಯತೆಯನ್ನು ಮನಗಂಡ ಊರ ಜನರು ’ಸರಕಾರಿ ಶಾಲೆ ಉಳಿಸಿ ಬೆಳೆಸಿ’ ರಾಜ್ಯ ಸಮಿತಿ ಸಹಾಯದ ಮೂಲಕ ಅಭಿಯಾನ ನಡೆಸಿ ನಮ್ಮೂರಿನ ಶಾಲೆ ಉಳಿಸಿ ಎಂದು ಮನವಿ ಮಾಡಬೇಕಾಯಿತು. ಇಂತಹ ಪರಿಸ್ಥಿತಿ ಸೃಷ್ಟಿಗೆ ಕಾರಣ ಯಾರು..? ಇದಕ್ಕೆ ಉತ್ತರ ನೀಡುವವರು ಯಾರು..? ಕುಮಾರಸ್ವಾಮಿ ಸಿಎಂ ಆದ ವೇಳೆ ರಾಜ್ಯದಲ್ಲಿರುವ ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಆರಂಭಿಸುತ್ತೇವೆ ಎಂದು ಮಾತು ಕೊಟ್ಟಿದ್ದರು. ಈ ಭರವಸೆ ಕೊಟ್ಟು ತಿಂಗಳುಗಳೇ ಕಳೆದಿವೆ. ಈ ಮಧ್ಯೆ ಮೊನ್ನೆ ರಾಜ್ಯಪಾಲ ವಜೂಭಾಯಿ ವಾಲಾ ಕೂಡಾ ಅಧಿವೇಶನದಲ್ಲಿ ಇದೇ ಹೇಳಿಕೆಯನ್ನು ನೀಡಿದ್ದರು. ಈ ಮಾತು ಕೇವಲ ದಾಖಲೆಗಳಲ್ಲಿ ಮಾತ್ರ ಉಳಿಯದೆ ಆದಷ್ಟು ಬೇಗನೇ ಕಾರ್ಯರೂಪಕ್ಕೆ ಬರಲಿ. ಇಂಗ್ಲಿಷ್ ಮೀಡಿಯಂ ಶಾಲೆಗಳ ಪ್ರಭಾವ ಮತ್ತು ಹಾವಳಿಯಿಂದಾಗಿ ಸರಕಾರಿ ಶಾಲೆಗಳಿಗೆ ಯಾರು ಹೋಗುತ್ತಿಲ್ಲ ಎಂಬ ಮಾತಿಗೆ ವಿರಾಮ ಹಾಕಿ ಸರಕಾರಿ ಶಾಲೆಗಳನ್ನು ಆಧುನೀಕರಣಗೊಳಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಸರಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡು ಆಂಗ್ಲಮಾಧ್ಯಮವನ್ನು ಆರಂಭಿಸಬೇಕಾಗಿದೆ. ಇದು ಜನರ ಆಗ್ರಹವಾಗಿದೆ.

Writer - - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News