ಈ ಬ್ಯಾಡ್ಮಿಂಟನ್ ಆಟಗಾರ್ತಿಗೆ 50 ಕೋಟಿ ರೂ. ಬಿಗ್ ಡೀಲ್

Update: 2019-02-09 03:59 GMT

ಹೈದರಾಬಾದ್, ಫೆ. 9: ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಪ್ರಸಿದ್ಧ ಚೀನಿ ಕ್ರೀಡಾ ಬ್ರಾಂಡ್ ಎನಿಸಿದ ಲೀ ನಿಂಗ್ ಜತೆ 60 ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಂಡಿದ್ದಾರೆ.

ಈ ನಾಲ್ಕು ವರ್ಷದ ಒಪ್ಪಂದ ಸಿಂಧು ಅವರಿಗೆ 50 ಕೋಟಿ ರೂ. ತಂದುಕೊಡಲಿದೆ ಎಂದು ಲೀ ನಿಂಗ್‌ನ ಪಾಲುದಾರ ಸಂಸ್ಥೆಯಾಗಿರುವ ಸನ್‌ಲೈಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮಹೇಂದ್ರ ಕಪೂರ್ ಪ್ರಕಟಿಸಿದ್ದಾರೆ.

"ಸಿಂಧು ಅವರ ಜತೆ ಮತ್ತೆ ಒಪ್ಪಂದ ಮಾಡಿಕೊಳ್ಳಲು ನಮಗೆ ಹರ್ಷವೆನಿಸುತ್ತದೆ. ಈ ನಾಲ್ಕು ವರ್ಷಗಳ ಒಪ್ಪಂದ ಸುಮಾರು 50 ಕೋಟಿ ಮೊತ್ತದ್ದು. ಸಿಂಧು 40 ಕೋಟಿ ರೂಪಾಯಿಗಳನ್ನು ಪ್ರಾಯೋಜಕತ್ವವಾಗಿ ಪಡೆಯುವರು. ಉಳಿದ ಮೊತ್ತದ ಸಾಧನ ಸಲಕರಣೆಗಳು ಸೇರಿ 50 ಕೋಟಿ ಮೊತ್ತವಾಗಲಿದೆ" ಎಂದು ಕಪೂರ್ ವಿವರಿಸಿದರು.

ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಜತೆಗಿನ ಸಹಯೋಗವನ್ನು ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದರು.

ಒಲಿಂಪಿಕ್ಸ್ ಮತ್ತು ವಿಶ್ವಚಾಂಪಿಯನ್‌ ಶಿಪ್‌ನಲ್ಲಿ ಬೆಳ್ಳಿಪದಕ ಗೆದ್ದ ಏಕೈಕ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆ ಸಿಂಧು ಅವರದ್ದು. ಒಲಿಂಪಿಕ್ಸ್ ಸಾಧನೆ ಬಳಿಕ ಸಿಂಧು ಕ್ರೀಡಾ ನಿರ್ವಹಣೆ ಕಂಪನಿ ಬೇಸ್‌ ಲೈನ್ ವೆಂಚರ್ಸ್‌ ಜತೆ 100 ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಂಡಿದ್ದರು. ಈ ವ್ಯವಸ್ಥಾಪನೆ ಒಪ್ಪಂದದ ಅಂಗವಾಗಿ ಸಿಂಧು ದೃಢೀಕರಿಸುತ್ತಿರುವ 14ನೇ ಉತ್ಪನ್ನ ಇದಾಗಿದೆ.

ಕಳೆದ ತಿಂಗಳು ಶ್ರೀಕಾಂತ್ 35 ಕೋಟಿ ರೂಪಾಯಿ ಒಪ್ಪಂದಕ್ಕೆ ಲೀ ನಿಂಗ್ ಜತೆ ಸಹಿ ಮಾಡಿದ್ದರು. "ನಮ್ಮ ಪ್ರಕಾರ ಭಾರತೀಯ ಆಟಗಾರರ ಗಳಿಕೆ ಕಡಿಮೆ. ಸಿಂಧು ಹಾಗೂ ಶ್ರೀಕಾಂತ್ ಮಾತ್ರವಲ್ಲದೇ ಇತರ ಆಟಗಾರರ ಜತೆಗೂ ನಾವು ಧೀರ್ಘಾವಧಿ ಸಹಯೋಗ ಹೊಂದಲು ಬಯಸಿದ್ದು, ಅವರ ನಿವೃತ್ತಿ ಬಳಿಕವೂ ಅವರಿಗೆ ಬೆಂಬಲ ನೀಡುವುದು ನಮ್ಮ ಯೋಜನೆ ಎಂದು ಕಪೂರ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News