ಗೃಹ ಪ್ರವೇಶ ಸಮಾರಂಭದ ಆಕರ್ಷಣೆಗೆ ಕರೆತಂದ ಆನೆಯಿಂದ ದಾಳಿ: ಇಬ್ಬರು ಅತಿಥಿಗಳ ಸಾವು

Update: 2019-02-09 09:23 GMT

ತಿರುವನಂತಪುರಂ, ಫೆ.9: ದೇವಳ ನಗರಿ ಗುರುವಾಯೂರಿನ ಕೊಟ್ಟಪಡಿ ಎಂಬಲ್ಲಿನ ಶೈಜು ಮತ್ತವರ ಕುಟುಂಬದ ಗೃಹ ಪ್ರವೇಶ ಸಮಾರಂಭಕ್ಕೆ ಎಲ್ಲರೂ ಆಗಮಿಸಿ ಖುಷಿಯಲ್ಲಿದ್ದ ಸಂದರ್ಭ ದುರಂತವೊಂದು ನಡೆದು ಹೋಯಿತು. ಹತ್ತಿರದಲ್ಲಿಯೇ ಇದ್ದ 54 ವರ್ಷದ ಆನೆಯೊಂದು ಗೃಹ ಪ್ರವೇಶಕ್ಕೆ ಆಗಮಿಸಿದ್ದ ಇಬ್ಬರು ಅತಿಥಿಗಳನ್ನು ತುಳಿದು ಸಾಯಿಸಿ, ಇತರ ಏಳು ಮಂದಿಗೆ ಗಾಯಗಳನ್ನುಂಟು ಮಾಡಿದೆ.

ಆನೆಯ ರೋಷಕ್ಕೆ ಬಲಿಯಾದವರನ್ನು ಕಣ್ಣೂರಿನ ನಾರಾಯಣನ್ ಪಟ್ಟೇರಿ (66) ಹಾಗೂ ಮುರುಗನ್ (60) ಎಂದು ಗುರುತಿಸಲಾಗಿದೆ. ನಾರಾಯಣನ್ ಸ್ಥಳದಲ್ಲಿಯೇ ಮೃತಪಟ್ಟರೆ ಮುರುಗನ್ ಆಸ್ಪತ್ರೆಯಲ್ಲಿ ಮೃತಪಟ್ಟರು.

ಈ ನಿರ್ದಿಷ್ಟ ಆನೆ ತೆಚ್ಚಿಕ್ಕೊಟ್ಟುಕಾವು ರಾಮಚಂದ್ರನ್  ರಾಜ್ಯದಲ್ಲಿ ಖ್ಯಾತಿ ಹಾಗೂ ಕುಖ್ಯಾತಿ ಎರಡನ್ನೂ ಪಡೆದಿತ್ತು. ಕೊಟ್ಟಪಾಡಿಯ ಚೆಂಬಳಕುಲಂಗರ ದೇವಳದ ಜಾತ್ರೆಗಾಗಿ ಶೈಜು ಅವರೇ ಅದನ್ನು ದೇವಳಕ್ಕೆ ತರುವ ಏರ್ಪಾಟು ಮಾಡಿದ್ದರೆನ್ನಲಾಗಿದೆ. ಶುಕ್ರವಾರ ಗೃಹ ಪ್ರವೇಶವಿದ್ದುದರಿಂದ ಆನೆಯನ್ನು ಮೊದಲು ಮನೆ ಸಮೀಪ ತರಲಾಗಿತ್ತು. ಆಗ ಸಂಗೀತ ಸಮಾರಂಭ ನಡೆಯುತ್ತಿದ್ದುದರಿಂದ ಭಯಗೊಂಡ ಆನೆ ದಿಕ್ಕಾಪಾಲಾಗಿ ಓಡಲಾರಂಭಿಸಿತ್ತು. ನೆರೆಮನೆಯಲ್ಲಿ ಪಟಾಕಿ ಕೂಡ ಸಿಡಿಸಿದ್ದರಿಂದ ಅದು ಮತ್ತಷ್ಟು ಹೆದರಿತ್ತು ಎನ್ನಲಾಗಿದೆ.

ಈ ಆನೆಗೆ ಒಂದೇ ಕಣ್ಣಿದ್ದು ಅದು ಇಲ್ಲಿಯ ತನಕ  11 ಜನರನ್ನು ಬಲಿ ಪಡೆದಿದೆಯಲ್ಲದೆ ತಿರುವಂಬಾಡಿ ಶ್ರೀ ಕೃಷ್ಣ ಮೂರ್ತಿಯನ್ನು ಹೊರುವ ಆನೆ ಸಹಿತ ಮೂರು ಇತರ ಆನೆಗಳನ್ನು ಕೊಂದಿತ್ತು.

ಶುಕ್ರವಾರ ಎರಡು ಜನರನ್ನು ಬಲಿ ಪಡೆದ ಆನೆ ರಾಜ್ಯಾದ್ಯಂತ ಚಿರಪರಿಚಿತವಾಗಿದ್ದು ಆತನಿಗೆಂದೇ ಹಲವಾರು ಫೇಸ್ಬುಕ್ ಪುಟಗಳಿವೆ ಹಾಗೂ ಸಾವಿರಾರು ಅಭಿಮಾನಿಗಳಿದ್ದಾರೆ.

ಮೂಲತಃ ಬಿಹಾರದ ಈ ಆನೆಯನ್ನು ಕೇರಳಕ್ಕೆ 1982ರಲ್ಲಿ ತರಲಾಗಿತ್ತಲ್ಲದೆ ಅದರ ಈಗಿನ ಮಾಲಕರಾದ ಪೆರಮಂಗಲಂ ತೆಚ್ಚಿಕೊಟ್ಟುಕಾವು ದೇವಸ್ಥಾನಕ್ಕೆ  ಮಾರಾಟ ಮಾಡಲಾಗಿತ್ತು.

ಸಾರ್ವಜನಿಕವಾಗಿ ಈ ಆನೆಯನ್ನು ಕೊಂಡು ಹೋಗುವುದನ್ನು ಕೇರಳ ಹೈಕೋರ್ಟ್  2016ರ ತನಕ ಕನಿಷ್ಠ ಆರು ಬಾರಿ ನಿಷೇಧಿಸಿದ್ದರೂ ಅದನ್ನು ಈಗಲೂ ಜಾತ್ರೆಯ ಸಂದರ್ಭ 70ರಿಂದ 80 ದೇವಳಗಳಿಗೆ ಕರೆದೊಯ್ಯಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News