ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷೆ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-02-09 13:03 GMT

ಹುಬ್ಬಳ್ಳಿ, ಫೆ.9: ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರದ್ದು ಎನ್ನಲಾದ ಆಡಿಯೋ ವಿಚಾರವನ್ನು ಸ್ಪೀಕರ್ ರಮೇಶ್‌ ಕುಮಾರ್ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಹೆಸರು ಆಡಿಯೋದಲ್ಲಿ ಪ್ರಸ್ತಾಪ ಆಗಿದೆ. ಹೀಗಾಗಿ ಅವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು.

ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯತ್ತಿವೆ. ನಮ್ಮ ಸರಕಾರ ಹಾಗೂ ಗೃಹ ಇಲಾಖೆಯೂ ಈ ಆಡಿಯೋ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಆಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ದ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಎಫ್‌ಎಸ್‌ಎಲ್ ವರದಿಯಿಂದ ಆಡಿಯೋದ ಸತ್ಯಾಸತ್ಯತೆ ಬಹಿರಂಗವಾಗಲಿದೆ. ರಾಜ್ಯ ಸರಕಾರದ ಬಜೆಟ್ ಮಂಡನೆಯಾಗಿದೆ. ವಿಧಾನಮಂಡಲದಲ್ಲಿ ಬಜೆಟ್‌ಗೆ ಅನುಮೋದನೆಯೂ ಸಿಗುತ್ತದೆ. ನಾಲ್ಕು ಜನ ಶಾಸಕರು ಗೈರಾದರೆ, ಬಜೆಟ್ ಅನುಮೋದನೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ನಮ್ಮ ಶಾಸಕರನ್ನು ಹೊಟೇಲ್‌ನಲ್ಲಿ ಕೂಡಿ ಹಾಕಿದ್ದಾರೆ. ಅವರು ಯಾರ ಜೊತೆಯೂ ಸಂಪರ್ಕ ಸಾಧಿಸದಂತೆ ಅವರ ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದಾರೆ. ಅವರು ಬೇರೆ ಎಲ್ಲೂ ಹೋಗುವುದಿಲ್ಲ. ನಮ್ಮ ಪಕ್ಷದಲ್ಲಿಯೇ ಮುಂದುವರೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News