ವಾಮಮಾರ್ಗದಲ್ಲಿ ಅಧಿಕಾರಕ್ಕೇರಲು ಬಿಜೆಪಿ ಯತ್ನ: ರಾಮಲಿಂಗಾರೆಡ್ಡಿ

Update: 2019-02-09 13:13 GMT

ಬೆಂಗಳೂರು, ಫೆ.9: ಬಿಜೆಪಿ ನಾಯಕರು ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಸರತ್ತು ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಶನಿವಾರ ನಗರದ ಆನಂದ್‌ರಾವ್ ವೃತ್ತದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಹಣದ ಆಮಿಷವೊಡ್ಡುವ ಮೂಲಕ ಶಾಸಕರನ್ನು ಖರೀದಿಸಲು ಮುಂದಾಗಿರುವುದನ್ನು ಖಂಡಿಸಿ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರು ಪ್ರತಿಭಟನೆ ನಡೆಸಿದರು. ಇದರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಆರಂಭ ಮಾಡಿರುವ ಆಪರೇಷನ್ ಕಮಲ ಇಂದಿಗೂ ಮುಂದುವರೆದಿದೆ. ವಾಮಮಾರ್ಗಗಳ ಮೂಲಕ ಅಧಿಕಾರಕ್ಕೆ ಬರಬೇಕು ಎಂಬುದು ಅವರ ರಕ್ತದಲ್ಲಿಯೇ ಇದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ. ಆದರೆ, ಅವರು ಎಷ್ಟು ಆಪರೇಷನ್ ಮಾಡಿದರೂ ಸರಕಾರ ಸ್ಥಿರವಾಗಿರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಆಪರೇಷನ್ ಕಮಲಕ್ಕೆ ಯತ್ನಿಸಿದ ಬಿಜೆಪಿ ನಾಯಕರ ಆಡಿಯೋ ಬಿಡುಗಡೆಯಾಗಿದ್ದು, ಆ ಪಕ್ಷದ ನಾಯಕರ ನಿಜಬಣ್ಣ ಬಯಲಾಗಿದೆ. ಯಡಿಯೂರಪ್ಪ ಮಾತನಾಡಿರುವುದು ಮಿಮಿಕ್ರಿ ಎಂದು ಹೇಳುತ್ತಿದ್ದಾರೆ. ಅಂದರೆ ಇವರು ಬಹಳ ಸಾಚಾಗಳ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯ ರಿಝ್ವಾನ್ ಹರ್ಷದ್ ಮಾತನಾಡಿ, ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಹಲವಾರು ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಮತ್ತಿತರೆ ನಾಯಕರು 20-25 ಕೋಟಿ ಆಮಿಷವೊಡ್ಡುತ್ತಿದ್ದಾರೆ. ಅವರಿಗೆ ಇಷ್ಟು ಹಣ ಎಲ್ಲಿಂದ ಬರುತ್ತಿದೆ. ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಎನ್ನುತ್ತಾರೆ. ಈಗ ಈ ಸಂಬಂಧ ಯಾಕೆ ಚಕಾರವೆತ್ತುತಿಲ್ಲ ಎಂದು ದೂರಿದರು.

ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಮತ್ತಿತರರು ರಫೇಲ್ ಹಗರಣದಲ್ಲಿ, ಅಂಬಾನಿ, ಅದಾನಿಗಳಿಂದ ಪಡೆದಿರುವ ಹಣದಲ್ಲಿ ಶಾಸಕರನ್ನು ಖರೀದಿಸಲು ಮುಂದಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಇನ್ನು ಮುಂದೆ ಬಿಜೆಪಿಯ ಆಟ ನಡೆಯುವುದಿಲ್ಲ ಎಂದ ಅವರು, ಪಾರದರ್ಶಕ ರಾಜಕೀಯ ಜೀವನ ನಡೆಸಿರುವ ರಮೇಶ್ ಕುಮಾರ್‌ರನ್ನೇ ಬುಕ್ ಮಾಡಿಕೊಂಡಿದ್ದೇವೆ ಎಂದಿರುವುದು ಅತ್ಯಂತ ಅವಮಾನಕರ ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಪ್ರಜಾಪ್ರಭುತ್ವದ ವಿರೋಧಿಗಳು, ಕೋಮುವಾದಿಗಳು, ಸಂವಿಧಾನದ ವಿರೋಧಿಗಳಿಂದು ಹಣದ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲ ಮಾಡಲು ಮುಂದಾಗಿದ್ದಾರೆ. ಈ ಭ್ರಷ್ಟರ ವಿರುದ್ಧ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಾಸಕಿ ಸೌಮ್ಯರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಎನ್‌ಎಸ್‌ಯುಐನ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News