ಸಂವಿಧಾನ ಜಾರಿಯಾಗಿ ದಶಕಗಳೇ ಕಳೆದರೂ ಜಾತಿಗಳ ಲೇಔಟ್ ನಿರ್ಮಾಣ ನಿಂತಿಲ್ಲ: ಮಾವಳ್ಳಿ ಶಂಕರ್

Update: 2019-02-09 14:06 GMT

ಬೆಂಗಳೂರು, ಫೆ.9: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಜಾರಿಯಾಗಿ ದಶಕಗಳು ಕಳೆದರೂ ಇಂದಿಗೂ ಜಾತಿ ಪದ್ಧತಿ ಮುಂದುವರಿದ್ದು, ನಮ್ಮ ಜಾತಿಗಳ ಹೆಸರಿನಲ್ಲಿ ಲೇಔಟ್‌ಗಳೇ ನಿರ್ಮಾಣವಾಗುತ್ತಿವೆ ಎಂದು ಡಿಎಸ್‌ಎಸ್ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.

ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ಆಯೋಜಿಸಿದ್ದ ‘ಮೊಳಕೆ ಕಾಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಪದವಿ, ಸ್ನಾತಕೋತ್ತರ, ಪಿಎಚ್.ಡಿ ಸೇರಿದಂತೆ ಹಲವು ಉನ್ನತ ಶಿಕ್ಷಣ ಪಡೆದವರೇ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ನಮ್ಮ ದೇಶ ಹಲವು ಜಾತಿ, ಧರ್ಮಗಳನ್ನು ಒಳಗೊಂಡಿರುವ ಬಹುತ್ವ ಭಾರತವಾಗಿದೆ. ಒಂದು ಕಡೆ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದರೆ, ಮತ್ತೊಂದು ಕಡೆ ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದರಿಂದಾಗಿ ಸೌಹಾರ್ದ, ಪ್ರೀತಿ, ಮಮತೆಯ ಸಂಬಂಧಗಳಿಲ್ಲದಂತಾಗುತ್ತಿದೆ. ನಾವು ಜಾತಿ ಎಂಬ ಪೆಡಂಭೂತದಿಂದ ಮುಕ್ತರಾಗಬೇಕು ಎಂದು ನುಡಿದರು.

ಹಿರಿಯ ಪತ್ರಕರ್ತ ಕೋಡಿಹೊಸಹಳ್ಳಿ ರಾಮಣ್ಣ ಮಾತನಾಡಿ, ಗೌಡಗೆರೆ ಮಾಯುಶ್ರೀ ಅವರ ಮೊಳಕೆ ಕಾಳು ಕೃತಿಯಲ್ಲಿ ದೇಶದ ಜಾತಿ ವ್ಯವಸ್ಥೆ, ಜಾತಿ ರಾಜಕಾರಣ, ಧರ್ಮ ರಾಜಕಾರಣ ಸೇರಿದಂತೆ ಮತ್ತಿತರೆ ವಾಸ್ತವಕ್ಕೆ ಹತ್ತಿರವಾದ ಅಂಶಗಳಿವೆ ಎಂದು ಶ್ಲಾಘಿಸಿದರು.

ಪ್ರಸಕ್ತ ವರ್ಷದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿವೆ. ಈ ಸಂದರ್ಭದಲ್ಲಿ ಈ ಕೃತಿ ಅತ್ಯಂತ ಮಹತ್ವವಾದುದಾಗಿದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ರಾಜಕೀಯವನ್ನು ಮಾರ್ಮಿಕವಾಗಿ ಇದರಲ್ಲಿ ಹೇಳಿದ್ದಾರೆ. ಮತ, ಜಾತಿ ಹೆಸರಿನಲ್ಲಿ ಮತ ಪಡೆಯುವ ಸಂಚು ಹೂಡಲಾಗುತ್ತಿದೆ. ಶೂದ್ರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಧರ್ಮವೆಂಬ ಅಸ್ತ್ರ ಬಳಸಿಕೊಳ್ಳಲಾಗುತ್ತದೆ ಎಂಬ ಅಂಶಗಳ ಬಗ್ಗೆ ಸಾಧ್ಯವಾದಷ್ಟರ ಮಟ್ಟಿಗೆ ಬೆಳಕು ಚೆಲ್ಲಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News