ಸರಕಾರಿ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿ ದೇಶ ವಿರೋಧಿ ಕ್ರಮ: ಪ್ರೊ.ರವಿವರ್ಮಕುಮಾರ್

Update: 2019-02-09 14:23 GMT

ಬೆಂಗಳೂರು, ಫೆ. 9: ‘ದೇಶದ ಸಂವಿಧಾನದಲ್ಲಿ ಎನ್‌ಆರ್‌ಐ ಕೋಟಾಗೆ ಯಾವುದೇ ಅವಕಾಶವಿಲ್ಲ. ಆದರೆ, ಸರಕಾರಿ ವೈದ್ಯಕೀಯ-ದಂತ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟ ಜಾರಿ ಮಾಡುವುದು ದೇಶ ವಿರೋಧಿ ಕ್ರಮವಾಗಿದೆ. ಮಾತ್ರವಲ್ಲ, ಕಾನೂನು ಬಾಹಿರ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.

ಶನಿವಾರ ಇಲ್ಲಿನ ಕೆಜಿಎಸ್ ಕ್ಲಬ್‌ನಲ್ಲಿ ಎನ್‌ಆರ್‌ಐ ಕೋಟ ಜಾರಿ ಮತ್ತು ಶುಲ್ಕ ಹೆಚ್ಚಳ ಖಂಡಿಸಿ ಎಐಡಿಎಸ್‌ಒ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಹಣದಿಂದ ಕಟ್ಟಿದ ಸರಕಾರಿ ಆಸ್ಪತ್ರೆಗಳು, ಸರಕಾರಿ ಕಾಲೇಜುಗಳ ಸೀಟುಗಳನ್ನು ಪರಕೀಯರಿಗೆ ಮಾರಾಟ ಮಾಡುವುದು ದೇಶ ವಿರೊಧಿ ನೀತಿ ಎಂದು ಟೀಕಿಸಿದರು.

ಈಗಾಗಲೇ ದೇಶದಲ್ಲಿ ವೈದ್ಯ ಹಾಗೂ ರೋಗಿಯ ಪ್ರಮಾಣ ಭಾರಿ ಕಳಪೆ ಮಟ್ಟದಲ್ಲಿದೆ. ದೇಶದಲ್ಲಿ 2 ಸಾವಿರ ರೋಗಿಗೆ ಕೇವಲ ಒಬ್ಬ ವೈದ್ಯನಿದ್ದಾನೆ. ಎನ್‌ಆರ್‌ಐ ಕೋಟಾ ಜಾರಿಯಾದಲ್ಲಿ ಈ ಪ್ರಮಾಣ 5 ಸಾವಿರ ರೋಗಿಗೆ ಒಬ್ಬ ವೈದ್ಯನೂ ಸಿಗದಿರುವ ಭಯಾನಕ ಪರಿಸ್ಥಿತಿ ಸೃಷ್ಟಿಯಾಗುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು

ರಾಜ್ಯ ಸರಕಾರದ ಎನ್‌ಆರ್‌ಐ ಕೋಟ ಜಾರಿ, ಶೇ.300ರಿಂದ 800ರಷ್ಟು ಶುಲ್ಕ ಹೆಚ್ಚಳದ ಪ್ರಸ್ತಾವನೆಯು ನೀತಿಯಾಗಿ ಹೊರಹೊಮ್ಮುವುದಕ್ಕೆ ನನ್ನ ತೀವ್ರ ವಿರೋಧವಿದೆ ಎಂದ ಅವರು, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಇದರ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಎಂಎ ಚುನಾಯಿತ ಅಧ್ಯಕ್ಷ ಡಾ. ಮಧುಸೂದನ್ ಕರಿಗನೂರು ಮಾತನಾಡಿ, ವಿದ್ಯಾರ್ಥಿಗಳನ್ನು ಆದಾಯದ ಮೂಲವನ್ನಾಗಿಸಿಕೊಳ್ಳಲು ತಯಾರಾಗಿದ್ದು, ಇದು ಬಡ ವಿದ್ಯಾರ್ಥಿ ವಿರೋಧಿ ಹಾಗು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದು ಆಕ್ಷೇಪಿಸಿದರು.

ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿ ಉಮಾ, ದೇಶದಲ್ಲಿ ಒಳ್ಳೆಯ ವೈದ್ಯರಾಗುವ ಅವಶ್ಯಕತೆಯಿಲ್ಲ. ವೈದ್ಯಕೀಯ ಓದ ಬಯಸುವ ವಿದ್ಯಾರ್ಥಿಗಳು ಮೊದಲು ಹೋರಾಟನಿರತ ಪ್ರಜೆಗಳಾಗುವ ಅವಶ್ಯಕತೆಯಿದೆ. ಏಕೆಂದರೆ, ಸರಕಾರವೇ ಶ್ರೀಮಂತರಿಗೆ ಕೆಂಪುಹಾಸಿನ ಸ್ವಾಗತ ಕೋರುತ್ತಿದೆ. ಎನ್‌ಆರ್‌ಐ ಕೋಟಾ, ಶುಲ್ಕ ಹೆಚ್ಚಳ ವೈದ್ಯಕೀಯ ಶಿಕ್ಷಣದ ಪ್ರಗತಿಯಲ್ಲ. ಬದಲಿಗೆ ಶಿಕ್ಷಣವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖಾಸಗೀಕರಣಗೊಳಿಸುವ ಬಹುದೊಡ್ಡ ಹುನ್ನಾರವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News