ಮೀಟೂ ಪ್ರಕರಣದ ಮೊದಲ ಬಲಿಪಶು ಅಕ್ಕಮಹಾದೇವಿ: ಮಾಜಿ ಸಚಿವೆ ರಾಣಿಸತೀಶ್
ಬೆಂಗಳೂರು, ಫೆ.9: ಮೀಟೂ ಪ್ರಕರಣ ಹೊಸದೇನು ಅಲ್ಲ. 12ನೆ ಶತಮಾನದಲ್ಲಿ ವಚನಕಾರ್ತಿ ಅಕ್ಕಮಹಾದೇವಿ ಮೀಟೂ ಪ್ರಕರಣಕ್ಕೆ ಬಲಿಪಶುವಾದ ಪ್ರಥಮ ಮಹಿಳೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ತಿಳಿಸಿದರು.
ಶನಿವಾರ ಮಾನಿನಿ ಕಲಾ ಕೂಟ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಮಹಿಳಾ ಸಾಧಕಿಯರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೌಶಿಕ ಮಹಾರಾಜನ ಲೈಂಗಿಕ ಕಿರುಕುಳಕ್ಕೆ ಅಕ್ಕಮಹಾದೇವಿ ಬೇಸತ್ತಿದ್ದಳು. ಆತನ ಕಿರುಕುಳ ತಾಳಲಾರದೆ ತನ್ನ ಊರನ್ನೆ ಬಿಡಬೇಕಾಯಿತು ಎಂದು ತಿಳಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇವತ್ತು, ನಿನ್ನೆಯದಲ್ಲ. ಸಾವಿರಾರು ವರ್ಷಗಳಿಂದಲೂ ಮಹಿಳೆಯ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಇದೆಲ್ಲವನ್ನು ಎದುರಿಸಿಕೊಂಡು ಮಹಿಳೆ ಸಾಗಿ ಬಂದಿದ್ದಾಳೆ. ಮುಂದೆಯೂ ಬರುವ ಎಲ್ಲ ಒತ್ತಡ, ಕಿರುಕುಳ ಹಾಗೂ ದೌರ್ಜನ್ಯಗಳನ್ನು ಮೀರಿ ಬೆಳೆಯಬೇಕಿದೆ ಎಂದು ಅವರು ಹೇಳಿದರು.
ಮಹಿಳೆ ರಾಜಕೀಯ ಸೇರಿದಂತೆ ಯಾವುದೆ ಕ್ಷೇತ್ರದಲ್ಲಿ ಮುನ್ನೆಲೆಗೆ ಬರುವುದು ಅಷ್ಟು ಸುಲಭವಲ್ಲ. ಮೊದಲ ಹಂತದಲ್ಲಿ ಅವಮಾನ, ಕಿರುಕುಳ ಸಾಮಾನ್ಯವಾಗಿ ಎದುರಿಸಬೇಕಾಗುತ್ತದೆ. ಅದೆಲ್ಲವನ್ನು ಮೀರಿ ಗಟ್ಟಿಯಾಗಿ ನಿಂತಾಗ ಮಾತ್ರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎತ್ತರಕ್ಕೆ ಬೆಳೆಯಬಹುದು. ಹೀಗಾಗಿ ಮಹಿಳಾ ಸಮುದಾಯ ಪರಸ್ಪರ ಬೆಂಬಲವಾಗಿ ಸಹಕರಿಸುತ್ತಾ ಒಟ್ಟಾಗಿ ಮುನ್ನಡೆ ಸಾಧಿಸಬೇಕೆಂದು ಅವರು ಆಶಿಸಿದರು.
ಅವಕಾಶ ಸಿಕ್ಕರೆ ಪುರುಷರಿಗಿಂತ ಮಹಿಳೆ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲಳು ಎಂಬುದನ್ನು ಅನೇಕ ವಿಚಾರಗಳಲ್ಲಿ ಸಾಬೀತು ಪಡಿಸಿದ್ದಾಳೆ. ಆದರೂ ಮಹಿಳಾ ಸಮುದಾಯಕ್ಕೆ ಅವಕಾಶಗಳು ಸಿಗುತ್ತಿಲ್ಲ. ಇದನ್ನೆ ಒಂದು ಸವಾಲಾಗಿ ಸ್ವೀಕರಿಸಿ ನಿರಂತರವಾದ ಪರಿಶ್ರಮದಿಂದ ವಿವಿಧ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರಬೇಕೆಂದು ಅವರು ಹೇಳಿದರು.
ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ಇವತ್ತು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಮಹಿಳಾ ಸಮುದಾಯ ರಾಜಕೀಯದತ್ತ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ರಾಜಕೀಯ ಅರಿವನ್ನು ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ, ಹಿರಿಯ ನಟಿ ಆರ್.ಟಿ.ರಮಾ, ಪ್ರಮೀಳಾ ಜೋಷಾಯ್, ಕೆ.ಆರ್.ಸಂಧ್ಯಾರೆಡ್ಡಿ, ಉಷಾ ದಾತಾರ್ ಅವರಿಗೆ ಸಾಧಕ ಮಾನಿನಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಮುಖ್ಯ ಅತಿಥಿಗಳಾಗಿ ಕೆ.ಎಂ.ಜಾನಕಿ ಹೇಮಾ ಪಟ್ಟಣಶೆಟ್ಟಿ ಮತ್ತಿತರರಿದ್ದರು.
ಹಿಂದಿನ ದಿನಗಳಲ್ಲಿ ಸಿನೆಮಾ ಕ್ಷೇತ್ರದಲ್ಲಿ ನಟಿಯಾಗಿ ಅಭಿನಯಿಸುವವರಿಗೆ ಮನ್ನಣೆ ಸಿಗುತ್ತಿರಲಿಲ್ಲ. ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ತಂದೆಯಿಂದಲೆ ಹಲವು ಬಾರಿ ಕಪಾಳಕ್ಕೆ ಬಿಗಿಸಿಕೊಂಡಿದ್ದೇನೆ. ಆದರೂ ಛಲ ಬಿಡದೆ ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡೆ. ಆದರೆ, ಇವತ್ತು ಅಂತಹ ವಾತಾವರಣ ಇಲ್ಲ. ಹೀಗಾಗಿ ಯುವತಿಯರು ತಮಗೆ ಆಸಕ್ತಿಯಿರುವ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧಕಿಯರಾಗಬೇಕು.
-ಪ್ರಮೀಳಾ ಜೋಷಾಯ್, ಹಿರಿಯ ನಟಿ