ರಸ್ತೆ ಸುರಕ್ಷತೆಗೆ ಸಾರ್ವಜನಿಕರ ಪಾತ್ರ ಬಹಳ ಮುಖ್ಯ: ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ

Update: 2019-02-09 14:52 GMT

ಬೆಂಗಳೂರು, ಫೆ. 9: ‘ರಸ್ತೆ ಸುರಕ್ಷತಾ ಸಪ್ತಾಹ ಕೇವಲ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ ಅದರ ಉದ್ದೇಶ ಹಾಗೂ ಅನುಷ್ಠಾನದಲ್ಲಿ ಸಂಸ್ಥೆಯ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಪಾತ್ರ ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಹೇಳಿದ್ದಾರೆ.

ಶನಿವಾರ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕೆಎಸ್ಸಾರ್ಟಿಸಿ ಕೇಂದ್ರೀಯ ವಿಭಾಗ ಹಾಗೂ ಸಂಚಾರ ಪೊಲೀಸ್ ಜಂಟಿ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಯ ಬಸ್ಸುಗಳಲ್ಲಿ ಸುರಕ್ಷತೆಯ ಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡ್ಯೊಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕೆಂದು ಕರೆ ನೀಡಿದರು.

ರಸ್ತೆ ಸುರಕ್ಷತೆ-ಜೀವನರಕ್ಷೆ: ರಸ್ತೆ ಸುರಕ್ಷತಾ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲು ನಿಗಮದ 17 ವಿಭಾಗಕ್ಕೆ, ಪ್ರತಿಯೊಂದು ವಿಭಾಗಕ್ಕೆ ತಲಾ 25 ಸಾವಿರ ರೂ.ಗಳನ್ನು ಮಂಜೂರು ಮಾಡಲಾಗಿದೆ. ಬೆಂಗಳೂರು ಕೇಂದ್ರೀಯ ವಿಭಾಗದಿಂದ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಬದುಕಿ-ಬದುಕಿಸಿ ಶೀರ್ಷಿಕೆಯ ಬೀದಿನಾಟಕವನ್ನು ಏರ್ಪಡಿಸಲಾಗಿತ್ತು.

ಈ ಮಾದರಿಯ ಬೀದಿನಾಟಕವನ್ನು ಎಲ್ಲ ವಿಭಾಗಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರದರ್ಶನಕ್ಕೆ ಸೂಚಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗದಿಂದ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ-ಜೀವನರಕ್ಷೆ ಎಂಬ ಬೀದಿ ನಾಟಕವನ್ನು ಏರ್ಪಡಿಸಲಾಗಿತ್ತು.

ಲಾಲ್‌ಬಾಗ್ ಮುಖ್ಯ ದ್ವಾರದಿಂದ ರಿಚ್‌ಮಂಡ್ ರಸ್ತೆವರೆಗೆ ರಸ್ತೆ ಸುರಕ್ಷತಾ ಜಾಥಾ ಏರ್ಪಡಿಸಲಾಗಿತ್ತು. ಈ ವೇಳೆ ಡಿಸಿಪಿ ಜಗದೀಶ್ ಸೇರಿದಂತೆ ಸಂಸ್ಥೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News