ಯುವಜನ ಆಯೋಗ ರಚನೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ 'ಯುವ ಸಮಯ' ಆಚರಣೆ
ಬೆಂಗಳೂರು, ಫೆ.9: ಯುವಜನ ಸಬಲೀಕರಣ ಹಾಗೂ ಯುವ ಜನ ಹಕ್ಕುಗಳ ಸಂರಕ್ಷಣೆಯ ಸಲುವಾಗಿ ಯುವಜನ ಆಯೋಗ ರಚನೆ ಮಾಡಬೇಕು ಎಂದು ಆಗ್ರಹಿಸಿ ಸಂವಾದ ಯುವ ಸಂಪನ್ಮೂಲ ಹಾಗೂ ಯುವಮುನ್ನಡೆ ವತಿಯಿಂದ ನಗರದಲ್ಲಿಂದು ಯುವ ಸಮಯ ಆಚರಣೆ ಮಾಡುವ ಮೂಲಕ ಸರಕಾರವನ್ನು ಒತ್ತಾಯಿಸಿದರು.
ಶನಿವಾರ ನಗರದ ಯಡಿಯೂರು, ಸೌತ್‌ಎಂಡ್ ವೃತ್ತ, ಕಲಾ ಕಾಲೇಜು ಸೇರಿದಂತೆ ಹಲವು ಶಾಲಾ-ಕಾಲೇಜುಗಳಲ್ಲಿ ಯುವಜನ ಹಕ್ಕುಗಳ ಪರವಾಗಿ ಹಾಗೂ ಯುವಜನ ಆಯೋಗ ರಚನೆಯಾಗಬೇಕು ಎಂದು ಒತ್ತಾಯಿಸುವ ಹಾಡು, ಕುಣಿತ, ಕಲೆಗಳ ಪ್ರದರ್ಶನ ಹಾಗೂ ಆಯೋಗದ ಕುರಿತು ಚರ್ಚಾಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ಭಾರತವನ್ನು ಯುವರಾಷ್ಟ್ರ ಎಂದು ಕರೆಯುತ್ತಿದ್ದು, ದೇಶದಲ್ಲಿ ಸುಮಾರು ಶೇ.50 ರಷ್ಟು ಯುವಜನರಿದ್ದಾರೆ. ಕರ್ನಾಟಕದಲ್ಲಿ 1.86 ಕೋಟಿ ಯುವಜನತೆಯಿದ್ದು, ಅವರಿಗೆ ಅಗತ್ಯವಾದ ನಿರ್ದಿಷ್ಟವಾದ ಹಕ್ಕುಗಳಿಲ್ಲ. ತಮಗೆ ಆಗುತ್ತಿರುವ ಅನ್ಯಾಯವನ್ನು ಮುನ್ನೆಲೆಗೆ ತರಲು, ಬಗೆಹರಿಸಿಕೊಳ್ಳಲು ಒಂದು ನಿರ್ದಿಷ್ಟವಾದ ಸರಕಾರಿ ಸಂಸ್ಥೆಯಿಲ್ಲ. ಆದುದರಿಂದಾಗಿ ಯುವಜನರಿಗಾಗಿಯೇ ಒಂದು ಪ್ರತ್ಯೇಕ ಆಯೋಗ ಅಗತ್ಯವಾಗಿದೆ ಎಂದು ಯುವ ಸಂಪನ್ಮೂಲ ಕೇಂದ್ರದ ಮುಂದಾಳು ಹನುಮಂತ ಹಾಲಿಗೇರಿ ಹೇಳಿದರು.
ಯುವಜನರ ಹಕ್ಕುಗಳು ಘೋಷಣೆಯಾದರೆ ಸಾಕಾಗುವುದಿಲ್ಲ. ಅವುಗಳ ರಕ್ಷಣೆಗಾಗಿ ಒಂದು ಸರಕಾರಿ ಸಂಸ್ಥೆಯ ಅಗತ್ಯವಿದೆ. ಅದಕ್ಕಾಗಿಯೇ ನಾವಿಂದು ಯುವಜನ ಆಯೋಗವನ್ನು ಸ್ಥಾಪನೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯ ಮಾಡಲಾಗುತ್ತಿದೆ. ಆಯೋಗ ಸ್ಥಾಪನೆಯಾದರೆ ಯುವಜನರ ಶಿಕ್ಷಣ ಮತ್ತು ಸಬಲೀಕರಣಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಿ ಅವುಗಳನ್ನು ಅನುಷ್ಠಾನವಾಗುವಂತೆ ನೋಡಿಕೊಳುತ್ತದೆ ಎಂದು ಆಂದೋಲನದ ಸದಸ್ಯ ಶಿವರಾಜು ತಿಳಿಸಿದರು.
ದೇಶದಲ್ಲಿ ಪ್ರತಿವರ್ಷ ವಿದ್ಯಾಭ್ಯಾಸ ಮುಗಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಯುವಜನರು ಹೊರಗೆ ಬರುತ್ತಿದ್ದಾರೆ. ಆದರೆ, ಎಲ್ಲರಿಗೂ ಸರಿಯಾದ ಕೆಲಸ ಸಿಗದೇ ಅತಂತ್ರ ಸ್ಥಿತಿಯಲ್ಲಿ ಜೀವನ ಕಳೆಯುವಂತಾಗಿದೆ. ಕರ್ನಾಟಕದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಯುವ ಸಮುದಾಯ ಭದ್ರತೆಯಿಲ್ಲದ, ನಿಗದಿತ ವೇತನ ಸಿಗದೇ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹೀಗಿರುವಾಗ ಪ್ರತಿವರ್ಷ ಔದ್ಯೋಗಿಕ ಕ್ಷೇತ್ರಕ್ಕೆ ಕಾಲಿಡುವವರ ಸ್ಥಿತಿ ಏನು ಎಂಬುದು ಪ್ರಶ್ನೆಯಾಗಿದೆ. ಹೀಗಾಗಿ, ಯುವಜನರ ಹಕ್ಕುಗಳನ್ನು ಘೋಷಣೆ ಮಾಡಬೇಕು. ಅದಕ್ಕೆ ಆಯೋಗ ರಚನೆಯಾಗಬೇಕು ಎಂದು ಆಂದೋಲದ ಮೂಲಕ ಆಗ್ರಹಿಸಲಾಯಿತು.
ರಾಜ್ಯ ಸರಕಾರವು ಅಧಿವೇಶನದಲ್ಲಿ ಯುವಜನ ಆಯೋಗದ ಕಡರು ತಯಾರಿಸಿ ಉಭಯ ಸದನಗಳಲ್ಲಿ ಮಂಡಿಸಿ, ಅದನ್ನು ಕಾಯ್ದೆ ಮಾಡಬೇಕು. ಅನಂತರ ಸೂಕ್ತ ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ-ಯುವಜನರು ಸರಕಾರದ ಗಮನ ಸೆಳೆಯಲು ಮುಂದಾಗಿದ್ದೇವೆ. ಇದಕ್ಕೆ ಪೋಷಕರು, ಶಿಕ್ಷಕರು, ಸಾರ್ವಜನಿಕರು ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.