ಮಹಾಮೈತ್ರಿ ಗೆದ್ದರೆ ವಾರಕ್ಕೆ ಆರು ಪ್ರಧಾನಿ, ರವಿವಾರ ರಜೆ: ಅಮಿತ್ ಶಾ ಲೇವಡಿ

Update: 2019-02-10 03:47 GMT

ಪಣಜಿ, ಫೆ. 10: "ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿ ಗೆದ್ದರೆ, ಮೈತ್ರಿಕೂಟದ ಪ್ರತಿಯೊಬ್ಬ ನಾಯಕರೂ ವಾರದ ಆರು ದಿನ ದಿನಕ್ಕೊಬ್ಬರಂತೆ ಪ್ರಧಾನಿಯಾಗುತ್ತಾರೆ. ರವಿವಾರ ದೇಶಕ್ಕೆ ರಜೆ ನೀಡಲಾಗುತ್ತದೆ" ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.

ಅಟಲ್ ಬೂತ್ ಕಾರ್ಯಕರ್ತರ ಸಮ್ಮೇಳನ ಅಂಗವಾಗಿ ಪಣಜಿ ಬಳಿಯ ಗ್ರಾಮದಲ್ಲಿ ಮಾತನಾಡಿದ ಅಮಿತ್ ಶಾ, "ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗುವಂತೆ ಕಾರ್ಯಕರ್ತರು ಖಾತರಿಪಡಿಸಬೇಕು. ನಮ್ಮ ಹೊಸ ಸರ್ಕಾರ ಕಾಶ್ಮೀರದಿಂದ ಕನ್ಯಾಕುಮಾರಿ, ಕೊಲ್ಕತ್ತಾವರೆಗೆ ನುಸುಳುಕೋರರನ್ನು ನಿರ್ಮೂಲನೆ ಮಾಡುತ್ತದೆ" ಎಂದರು.

ವಿವಾದಾತ್ಮಕ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ಬಗ್ಗೆ ಉಲ್ಲೇಖಿಸಿದ ಶಾ, "ಎನ್‌ಆರ್‌ಸಿ ಉದ್ದೇಶ ಅಕ್ರಮ ನುಸುಳುಕೋರರನ್ನು ಪತ್ತೆ ಮಾಡುವುದು. ಗೋವಾದಲ್ಲಿ ಕೂಡಾ ಎನ್‌ಆರ್‌ಸಿ ಕಾರ್ಯಾಚರಣೆ ನಡೆಸಬೇಕೇ ಎಂದು ನಾನು ರಾಹುಲ್‌ ಗಾಂಧಿಯವರಿಗೆ ಕೇಳಬಯಸುತ್ತೇನೆ" ಎಂದರು.

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ವಿರೋಧ ಪಕ್ಷಗಳು ಸಂಘಟಿತವಾಗುತ್ತಿರುವ ಬಗ್ಗೆ ವ್ಯಂಗ್ಯವಾಡಿದ ಅವರು, "ಮಹಾಘಟಬಂಧನದಿಂದ ಸೋಮವಾರ ಮಾಯಾವತಿ ಪ್ರಧಾನಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ಎಚ್.ಡಿ.ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಶುಕ್ರವಾರ ಎಂ.ಕೆ.ಸ್ವಾಲಿನ್, ಶನಿವಾರ ಶರದ್ ಪವಾರ್ ಪ್ರಧಾನಿಯಾಗುತ್ತಾರೆ. ರವಿವಾರ ಇಡೀ ದೇಶಕ್ಕೆ ರಜೆ ನೀಡಲಾಗುತ್ತದೆ" ಎಂದು ಕುಹಕವಾಡಿದರು.

ಇದಕ್ಕೂ ಮುನ್ನ ಪುಣೆಯಲ್ಲಿ ಇಂಥದ್ದೇ ಸಮಾವೇಶದಲ್ಲಿ ಮಾತನಾಡಿದ ಶಾ, "ಶರದ್ ಪವಾರ್ ಅವರು ತಾಕತ್ತಿದ್ದರೆ ಯುಪಿಎ ಅವಧಿಯಲ್ಲಿ ಇದ್ದ ಕೃಷಿ ಉತ್ಪನ್ನಗಳ ಉತ್ಪಾದನೆ ಹಾಗೂ ಮೋದಿ ಸರ್ಕಾರದ ಅವಧಿಯ ಕೃಷಿ ಉತ್ಪನ್ನಗಳ ಅಂಕಿ ಸಂಖ್ಯೆಯನ್ನು ಬಿಡುಗಡೆ ಮಾಡಿ ಹೋಲಿಕೆ ಮಾಡಲಿ" ಎಂದು ಸವಾಲು ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News