ತೆಲಂಗಾಣ: ಕೆಸಿಆರ್ ಸರಕಾರ ಅಧಿಕಾರಕ್ಕೆ ಬಂದು 2 ತಿಂಗಳು ಕಳೆದರೂ ಸಂಪುಟ ವಿಸ್ತರಣೆಯಾಗಿಲ್ಲ

Update: 2019-02-10 05:31 GMT

ಹೈದರಾಬಾದ್,ಫೆ.10: ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬಳಿಕ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಇನ್ನೂ ಸಂಪುಟ ವಿಸ್ತರಣೆಯಾಗಿಲ. ಡಿ.11ರಂದು ಫಲಿತಾಂಶ ಪ್ರಕಟವಾಗಿದೆ. 118 ಕ್ಷೇತ್ರಗಳಲ್ಲಿ 88 ಸ್ಥಾನ ಗೆಲ್ಲುವ ಮೂಲಕ ಟಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬಂದಿತ್ತು.

ಫಲಿತಾಂಶ ಬಂದು ಎರಡು ದಿನಗಳ ಬಳಿಕ ಚಂದ್ರಶೇಖರ್ ರಾವ್ ಕಳೆದ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಮುಹಮ್ಮದ್ ಮಹಮೂದ್ ಅಲಿ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. 66ರ ಹರೆಯದ ಅಲಿಗೆ ಗೃಹ ಸಚಿವ ಸ್ಥಾನ ನೀಡಲಾಗಿತ್ತು. ಇದೀಗ ಮುಖ್ಯಮಂತ್ರಿ ಕೆಸಿಆರ್ ಗೃಹ ಖಾತೆ ಹೊರತುಪಡಿಸಿ 12 ಖಾತೆಯನ್ನೂ ನಿಭಾಯಿಸುತ್ತಿದ್ದಾರೆ. ಪ್ರಗತಿ ಭವನದಲ್ಲಿ ಸಚಿವ ಸಂಪುಟ ಸಭೆ ಬದಲಿಗೆ ಪರಾಮರ್ಶೆ ಸಭೆಯನ್ನು ನಡೆಸುತ್ತಿದ್ದಾರೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಸಹಿತ 18 ಸಚಿವರು ಇರುತ್ತಾರೆ. ಇದೀಗ 16 ಸ್ಥಾನಗಳು ಖಾಲಿಯಿದೆ. ಸಚಿವ ಸ್ಥಾನಕ್ಕೆ ಸುಮಾರು 30 ಮಂದಿ ಶಾಸಕರು ಕಣ್ಣಿಟ್ಟಿದ್ದು ತೀವ್ರ ಪೈಪೋಟಿಯಿದೆ.

ಜನವರಿಯಲ್ಲಿ ಪೊಂಗಲ್(ಸಂಕ್ರಾಂತಿ)ಹಬ್ಬ ಕಳೆದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಯುತ್ತಿದ್ದ ಸಚಿವಾಕಾಂಕ್ಷಿಗಳು ನಿರಾಸೆ ಅನುಭವಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಳಿಕ ಕೆಸಿಆರ್ ಸಂಪುಟ ವಿಸ್ತರಣೆ ಮಾಡಬಹುದು. 19 ಸ್ಥಾನ ಗೆದ್ದಿರುವ ಕಾಂಗ್ರೆಸ್‌ನ ಕೆಲವು ಶಾಸಕರನ್ನು ಪಕ್ಷಕ್ಕೆ ಸೆಳೆದು ಅವರಿಗೆ ಸಚಿವ ಸ್ಥಾನ ನೀಡುವ ಚಿಂತನೆಯೂ ಅವರಲ್ಲಿದೆ.

 ಮೂಢನಂಬಿಕೆಯನ್ನು ಬಲವಾಗಿ ನಂಬುವ ಕೆಸಿಆರ್ ಸಂಪುಟ ವಿಸ್ತರಣೆಗೆ ಮಂಗಳಕರ ದಿನಕ್ಕಾಗಿ ಕಾಯುತ್ತಿದ್ದಾರೆ. ಜನವರಿ ಅಂತ್ಯದಲ್ಲಿ ಐದು ದಿನ ಮಹಾಯಜ್ಞವನ್ನು ಮಾಡಿದ್ದಾರೆ.

ಕೆಸಿಆರ್ ನಿಲುವನ್ನು ಟೀಕಿಸಿರುವ ಪ್ರತಿಪಕ್ಷ ಕಾಂಗ್ರೆಸ್, ''ರಾಜ್ಯದಲ್ಲಿ ಸಚಿವರು ಇಲ್ಲದ ಕಾರಣ ಜನತೆ ತಮ್ಮ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಸಂಕಷ್ಟದಲ್ಲಿದ್ದಾರೆ. ಸಂವಿಧಾನಕ್ಕೆ ಗೌರವವೇ ಇಲ್ಲವಾಗಿದೆ. ರಾಜ್ಯಪಾಲರು(ನರಸಿಂಹನ್)ಸಂವಿಧಾನ ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡದೇ ಕೆಸಿಆರ್ ಸರಕಾರ ಒನ್‌ಮ್ಯಾನ್ ಶೋ ನಡೆಸುತ್ತಿದೆ'' ಎಂದು ಎಐಸಿಸಿ ಸ್ರವನ್ ದಸೊಜು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News