ಟಿಎಂಸಿ ಶಾಸಕನ ಕೊಲೆ ಪ್ರಕರಣ: ಬಿಜೆಪಿ ನಾಯಕ ಮುಕುಲ್ ರಾಯ್ ವಿರುದ್ಧ ಪ್ರಕರಣ ದಾಖಲು

Update: 2019-02-10 16:29 GMT

 ಕೋಲ್ಕತ, ಫೆ.10: ಶನಿವಾರ ನಡೆದ ಟಿಎಂಸಿ ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಹನ್ಸಖಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮುಕುಲ್ ರಾಯ್ ಹೆಸರೂ ಇದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  ಶನಿವಾರ ಸಂಜೆ ಟಿಎಂಸಿ ಶಾಸಕ ಸತ್ಯಜಿತ್ ಬಿಸ್ವಾಸ್ ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫೂಲ್‌ಪುರದಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಲವೇ ಕ್ಷಣಗಳಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಮುಕುಲ್ ರಾಯ್ ಹೆಸರನ್ನು ಸೇರಿಸಿರುವುದು ಉಭಯ ಪಕ್ಷಗಳ ಮಧ್ಯೆ ಮತ್ತೆ ಮಾತಿನ ಸಮರಕ್ಕೆ ಕಾರಣವಾಗಿದೆ. ರಾಯ್ ಬಿಜೆಪಿಯ ಲೋಕಸಭಾ ಚುನಾವಣೆಯ ನಿರ್ವಹಣಾ ಸಮಿತಿಯ ಪಶ್ಚಿಮ ಬಂಗಾಳ ವಿಭಾಗದ ಉಸ್ತುವಾರಿಯೂ ಆಗಿದ್ದಾರೆ.

ಬಂಧಿತರನ್ನು ಕಾರ್ತಿಕ್ ಮಂಡಲ್ ಮತ್ತು ಸುಜಿತ್ ಮಂಡಲ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು ಎಂದು ವರದಿಯಾಗಿದೆ.

 ಈ ಮಧ್ಯೆ, ಶನಿವಾರ ರಾತ್ರಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ದಾಂಧಲೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಿಐಡಿ (ಅಪರಾಧ ತನಿಖಾ ದಳ) ತನಿಖೆಗೆ ರಾಜ್ಯ ಸರಕಾರ ಈಗಾಗಲೇ ಆದೇಶಿಸಿದೆ. ಮೃತ ಶಾಸಕರ ಅಂಗರಕ್ಷಕ ಪ್ರಭಾಸ್ ಮಂಡಲ್ ಹಾಗೂ ಹನ್ಸಖಲಿ ಪೊಲೀಸ್ ಠಾಣಾಧಿಕಾರಿ ಅನಿದ್ಯ ಬಸುರನ್ನು ಅಮಾನತುಗೊಳಿಸಲಾಗಿದೆ. ತನಿಖೆ ಮುಂದುವರಿದಿದ್ದು ಈ ಪ್ರಕರಣದಲ್ಲಿ ಇನ್ನೂ ಕೆಲವರು ಶಾಮೀಲಾಗಿರುವ ಶಂಕೆಯಿದೆ ಎಂದು ದಕ್ಷಿಣ ಬಂಗಾಳದ ಐಜಿಪಿ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ.

   ಮೃತ ಶಾಸಕನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಇಂತಹ ಕೀಳುಮಟ್ಟಕ್ಕೆ ಇಳಿಯಬಾರದು. ಈ ಘೋರ ಕೃತ್ಯಕ್ಕೆ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಸಚಿವ ರತ್ನ ಘೋಷ್ ಹೇಳಿದ್ದಾರೆ. ಇವರೂ ಸರಸ್ವತಿ ಪೂಜೆ ಉದ್ಘಾಟನಾ ಕಾರ್ಯದಲ್ಲಿ ಭಾಗವಹಿಸಿದ್ದು ಗುಂಡು ಹಾರಾಟ ನಡೆಯುವ ಕೆಲವೇ ಕ್ಷಣಗಳ ಮುಂಚೆ ಅಲ್ಲಿಂದ ತೆರಳಿದ್ದರು.

 ತನ್ನ ವಿರುದ್ಧದ ಆರೋಪವನ್ನು ಮುಕುಲ್ ರಾಯ್ ತಳ್ಳಿ ಹಾಕಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯ ಶಾಸಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನನ್ನು ಕಂಡರೆ ಟಿಎಂಸಿಗೆ ಭಯವಿರುವ ಕಾರಣ ಹೇಗಾದರೂ ಮಾಡಿ ತನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಎಂದು ರಾಯ್ ಹೇಳಿದ್ದಾರೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯ ಬಲಗೈ ಬಂಟನಾಗಿದ್ದ ಮುಕುಲ್ ರಾಯ್, ಬಳಿಕ ಮನಸ್ತಾಪ ಉಂಟಾಗಿ 2017ರಲ್ಲಿ ಬಿಜೆಪಿ ಸೇರಿದ್ದರು. ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ವಿನಾಕಾರಣ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ದಕ್ಷಿಣ ನಾಡಿಯಾ ಘಟಕದ ಬಿಜೆಪಿ ಅಧ್ಯಕ್ಷ ಜಗನ್ನಾಥ ಸರ್ಕಾರ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News