ಪೂರ್ವ ಸಿರಿಯ: ಐಸಿಸ್ ನೆಲೆಗಳ ಮೇಲೆ ಕುರ್ದ್ ಪಡೆಗಳ ದಾಳಿ ಆರಂಭ

Update: 2019-02-10 18:39 GMT

ಡಮಾಸ್ಕಸ್,ಫೆ.9: ಅಮೆರಿಕ ಬೆಂಬಲಿತ ಸಿರಿಯನ್ ಪ್ರಜಾತಾಂತ್ರಿಕ ಪಡೆ(ಎಸ್‌ಡಿಎಫ್)ಗಳು ಶನಿವಾರ ಪೂರ್ವ ಸಿರಿಯದಲ್ಲಿ ಐಸಿಸ್ ಉಗ್ರರ ವಿರುದ್ಧ ಅಂತಿಮ ಹಂತದ ದಾಳಿಯನ್ನು ಆರಂಭಿಸಿರುವುದಾಗಿ ಕುರ್ದ್ ಹೋರಾಟಗಾರರು ತಿಳಿಸಿದ್ದಾರೆ.

ದೇರಂ ಅಲ್‌ಝೌರ್ ಪ್ರಾಂತದ ಪೂರ್ವದಲ್ಲಿರುವ ಬಾಘೌಝ್ ಪಟ್ಟಣದಲ್ಲಿರುವ 20 ಸಾವಿರ ನಾಗರಿಕರನ್ನು ಸ್ಥಳಾಂತರಿಸಿದ ಬಳಿಕ ಎಸ್‌ಡಿಎಫ್ ಪಡೆಗಳು, ಪೂರ್ವ ಯುಫ್ರೆಟಿಸ್ ಪ್ರಾಂತದಲ್ಲಿರುವ ಐಸಿಸ್ ಪ್ರಾಬಲ್ಯದ ಪ್ರದೇಶದ ಮೇಲೆ ಶನಿವಾರ ರಾತ್ರಿ ಕಾರ್ಯಾಚರಣೆಯನ್ನು ಆರಂಭಿಸಿದವು ಎಂದು ಎಸ್‌ಡಿಎಫ್ ಮಾಧ್ಯಮ ಕಚೇರಿಯ ವರಿಷ್ಠ ಮುಸ್ತಾಫ ಬಾಲ್ಲಿ ತಿಳಿಸಿದ್ದಾರೆ. ಬಾಘೌಝ್‌ನಲ್ಲಿ ಇನ್ನೂ ಉಳಿದುಕೊಂಡಿರುವ ಎಲ್ಲಾ ಐಸಿಸ್ ಉಗ್ರರನ್ನು ನಿರ್ಮೂಲನೆಗೊಳಿಸುವುದೇ ಈ ಸಮರದ ಉದ್ದೇಶವಾಗಿದೆಯೆಂದು ಅವರು ಹೇಳಿದ್ದಾರೆ.

ಪೂರ್ವ ಯೂಫ್ರೆಟಿಸ್ ಪ್ರಾಂತದಿಂದ ಐಸಿಸ್ ಉಗ್ರರನ್ನು ಹೊರದಬ್ಬಲು ಎಸ್‌ಡಿಎಫ್ ಕಳೆದ ಸೆಪ್ಟೆಂಬರ್‌ನಿಂದೀಚೆಗೆ ಸಶಸ್ತ್ರ ಕಾರ್ಯಾಚರಣೆಯನ್ನು ನಡೆಸುತ್ತಿದೆ.

 ಕಳೆದ ಡಿಸೆಂಬರ್‌ನಿಂದೀಚೆಗೆ ಪೂರ್ವ ಯೂಫ್ರೆಟಿಸ್ ಪ್ರಾಂತದಲ್ಲಿ 37 ಸಾವಿರಕ್ಕೂ ಅಧಿಕ ನಾಗರಿಕರು, ಐಸಿಸ್ ವಶದಲ್ಲಿರುವ ಪ್ರದೇಶಗಳಿಂದ ಎಸ್‌ಡಿಎಫ್ ನಿಯಂತ್ರಣದ ಪ್ರದೇಶಗಳಿಗೆ ಪಲಾಯನ ಮಾಡಿದ್ದಾರೆಂದು ಸಿರಿಯದ ಮಾನವಹಕ್ಕು ಕಣ್ಗಾವಲು ಸಮಿತಿಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News