ಮೋದಿಯನ್ನು ಪತ್ರಕರ್ತ ರಾಜದೀಪ್ ಹೊಗಳಿದ್ದಾರೆಂದು ವೀಡಿಯೋ ವೈರಲ್ ಮಾಡಿ ಸಿಕ್ಕಿ ಬಿದ್ದ ಟ್ರೋಲ್ ಪಡೆಗಳು

Update: 2019-02-10 18:47 GMT

ಹೊಸದಿಲ್ಲಿ, ಫೆ. 10 : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಸುಳ್ಳು ಸುದ್ದಿಗಳ ಹಾವಳಿ ಮಿತಿಮೀರುತ್ತಿದೆ. ತಮ್ಮ ನೆಚ್ಚಿನ ಪಕ್ಷ, ನಾಯಕರ ಕುರಿತು ಉತ್ತಮ ಅಭಿಪ್ರಾಯ ತೋರಿಸುವ ಹಾಗು ತಮ್ಮ ವಿರೋಧ ಪಕ್ಷ, ನಾಯಕರ ಬಗ್ಗೆ ಋಣಾತ್ಮಕ ಅಭಿಪ್ರಾಯ ರೂಪಿಸುವ ಸುಳ್ಳು ಸುದ್ದಿಗಳು , ತಿರುಚಿದ ವೀಡಿಯೋಗಳು, ಪೋಸ್ಟ್ ಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಇಂತಹದ್ದೇ ಒಂದು ವೈರಲ್ ವೀಡಿಯೋದ ಅಸಲಿಯತ್ತು ರವಿವಾರ ತಡರಾತ್ರಿ ಬಯಲಿಗೆ ಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರನ್ನೇ ಗೆಲ್ಲಿಸಬೇಕು ಎಂದು ಪಣತೊಟ್ಟಿರುವವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ವೀಡಿಯೋ ಒಂದರ ಹಿಂದಿರುವ ಕಟು ಸತ್ಯವನ್ನು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಬಹಿರಂಗಪಡಿಸಿದ್ದಾರೆ.

ಈ ವೈರಲ್ ವೀಡಿಯೋದಲ್ಲಿ ರಾಜದೀಪ್ ಸರ್ದೇಸಾಯಿ ಮೋದಿ ನಾಯಕತ್ವದ ಉತ್ತಮ ಅಂಶಗಳನ್ನು ಹೇಳುತ್ತಿರುವುದು ಕಂಡು ಬರುತ್ತದೆ. ಹಾಗೆ ಇತರ ಕೆಲವರೂ ಮೋದಿ ನಾಯಕತ್ವದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುವುದು ಅಲ್ಲಿ ಕಂಡು ಬರುತ್ತದೆ. ಆದರೆ ಈ ವೀಡಿಯೋ ಅಪೂರ್ಣ. 2 ವರ್ಷಗಳ ಹಿಂದೆ ಮೋದಿ ಸರಕಾರ 3 ವರ್ಷ ಫೂರ್ಣಗೊಳಿಸಿದ ಸಂದರ್ಭದಲ್ಲಿ ತಾನು ನಡೆಸಿಕೊಟ್ಟ ಶೋ ಒಂದರಲ್ಲಿ ತಾನು ಮೋದಿ ಅವರ ಸಾಮರ್ಥ್ಯದ ಕುರಿತು ಹೇಳಿದ್ದನ್ನು ಮಾತ್ರ ಬಲಪಂಥೀಯ ಗುಂಪುಗಳು ಬಳಸಿಕೊಂಡು ವೀಡಿಯೋ ಮಾಡಿವೆ. ಅದೇ ಕಾರ್ಯಕ್ರಮದಲ್ಲಿ ನಾನು ಮೋದಿ ಅವರ ವೈಫಲ್ಯಗಳ ಕುರಿತೂ ಹೇಳಿದ್ದನು ಸಂಪರ್ಣವಾಗಿ ಬಿಟ್ಟು ಬಿಡಲಾಗಿದೆ.

ಈ ತಿರುಚಿದ ವೀಡಿಯೋ ನೋಡಿ ನಾನು ಮತ್ತು ಇಂಡಿಯಾ ಟುಡೆ ಪ್ರಧಾನಿ ಮೋದಿಯ ಸಮರ್ಥನೆಗೆ ಇಳಿದಿದ್ದೇವೆ ಎಂಬಂತೆ ಚಿತ್ರಿಸಲಾಗಿದೆ ಎಂದು ರಾಜದೀಪ್ ಸರ್ದೇಸಾಯಿ ರವಿವಾರ ಹಾಕಿರುವ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ನಾನು ಒಬ್ಬ ವೃತಿಪರ ಪತ್ರಕರ್ತ ಸಮಾಜದಲ್ಲಿರುವ ವಿಷಯಗಳಿಗೆ ವಿಶೇಷವಾಗಿ ಅಧಿಕಾರದಲ್ಲಿರುವವರ ಬಗ್ಗೆ ಇರುವ ಸತ್ಯವನ್ನು ಇದ್ದ ಹಾಗೆ ಹೇಳುವುದು ನನ್ನ ಕೆಲಸ ಅದನ್ನೇ ನಾನು ಮಾಡುತ್ತಿದ್ದೇನೆ ಹಾಗು ಇನ್ನು ಮುಂದೆಯೂ ಮಾಡುತ್ತೇನೆ. ನಾನು ಎಂದಿಗೂ ಯಾರಿಗೂ ಶರಣಾಗಿಲ್ಲ. ನಾನು ಮೋದಿ ಸಮರ್ಥನೆಗೆ ಇಳಿದ್ದಿದ್ದೇನೆ ಎಂದು ನಂಬಿರುವ ಕೆಲವು ಮಿತ್ರರಿಗೂ ಸರಿಯಾಗಿ ಪರಿಶೀಲಿಸದೆ ದುಡುಕಿನ ನಿರ್ಧಾರಕ್ಕೆ ಬರಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿರುವ ರಾಜದೀಪ್ ಆ ಕಾರ್ಯಕ್ರಮದ ಪೂರ್ಣ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಅದು ಇಲ್ಲಿದೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News