ಭದ್ರತೆ ಹಿನ್ನೆಲೆ: ಯುಎಇಯಲ್ಲಿ ಆಸ್ಟ್ರೇಲಿಯ-ಪಾಕ್ ಏಕದಿನ ಸರಣಿ

Update: 2019-02-11 03:29 GMT

  

ಕರಾಚಿ,ಫೆ.10: ಭದ್ರತೆಯ ದೃಷ್ಟಿಯಿಂದ ಪಾಕಿಸ್ತಾನದಲ್ಲಿ ಆಡಲು ಆಸ್ಟ್ರೇಲಿಯ ಕ್ರಿಕೆಟ್ ತಂಡ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಆಸೀಸ್ ಮಧ್ಯೆ ನಡೆಯಲಿರುವ ಅಂತರ್‌ರಾಷ್ಟ್ರೀಯ ಏಕದಿನ ಸರಣಿಯ ಎಲ್ಲ ಐದು ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಸ್ವದೇಶದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಪುನರುಜ್ಜೀ ವನದ ದೃಷ್ಟಿಯಿಂದ ಸರಣಿಯ ಐದು ಏಕದಿನ ಪಂದ್ಯಗಳಲ್ಲಿ ಎರಡನ್ನು ಪಾಕಿಸ್ತಾನದಲ್ಲಿ ಆಡುವಂತೆ ಪಿಸಿಬಿ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಮನವಿ ಮಾಡಿತ್ತು. 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರಗಾಮಿಗಳು ದಾಳಿ ನಡೆದ ನಂತರ ಪಾಕಿಸ್ತಾನದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳ ಆತಿಥ್ಯವನ್ನು ಪಾಕಿಸ್ತಾನ ವಹಿಸುತ್ತಿದ್ದು ವಿಶ್ವ ಇಲೆವೆನ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯಗಳನ್ನಾಡಿದೆ. ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ ಈ ವರ್ಷ ಜನವರಿ 31ರಿಂದ ಫೆಬ್ರವರಿ 3ರ ವರೆಗೆ ಕರಾಚಿಯಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಿದೆ. ಭದ್ರತೆಯ ದೃಷ್ಟಿಯಿಂದ 1998ರಿಂದ ಆಸ್ಟ್ರೇಲಿಯದ ಯಾವ ಹಿರಿಯ ತಂಡ ಕೂಡಾ ಪಾಕಿಸ್ತಾನದಲ್ಲಿ ಆಡಿಲ್ಲ. ಹಾಗಾಗಿ ಈಗಿನ ತಂಡ ಕೂಡಾ ಆಡಲು ಒಪ್ಪಬಾರದು ಎಂಬ ಸರಕಾರದ ಆದೇಶವನ್ನು ಕ್ರಿಕೆಟ್ ಆಸ್ಟ್ರೇಲಿಯ ಪಾಲಿಸಿದೆ. ಸರಕಾರದ ಈ ಧೋರಣೆಗೆ ಪಿಸಿಬಿ ನಿರ್ದೇಶಕ ಝಾಕಿರ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News