ಭಾರತ ವಿರುದ್ಧ ಕ್ಲೀನ್‌ ಸ್ವೀಪ್ ಸಾಧಿಸಿದ ನ್ಯೂಝಿಲೆಂಡ್

Update: 2019-02-11 03:33 GMT

ಹ್ಯಾಮಿಲ್ಟನ್ ಫೆ.10: ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡಕ್ಕೆ ನಾಟಕೀಯ ಗೆಲುವು ಸಾಧಿಸುವ ಎಲ್ಲ ಅವಕಾಶವಿತ್ತು. ಗೆಲ್ಲಲು ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಲು ವಿಫಲವಾದ ಭಾರತ ಆತಿಥೇಯ ನ್ಯೂಝಿಲೆಂಡ್ ವಿರುದ್ದ ಕೇವಲ 2 ರನ್‌ನಿಂದ ಸೋಲುಂಡಿದೆ.

3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಎಲ್ಲ ಮೂರು ಪಂದ್ಯಗಳನ್ನು ಜಯಿಸಿದ ಕಿವೀಸ್ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ. ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 162ರನ್ ಚೇಸಿಂಗ್ ಮಾಡಿದ ಭಾರತಕ್ಕೆ ಸ್ಟಾರ್ ಓಪನರ್ ಸ್ಮತಿ ಮಂಧಾನಾ ಜೀವನಶ್ರೇಷ್ಠ ಇನಿಂಗ್ಸ್(86 ರನ್, 52 ಎಸೆತ)ಆಡಿ ತಂಡಕ್ಕೆ ಸಮಾಧಾನಕರ ಗೆಲುವು ತಂದುಕೊಡಲು ಯತ್ನಿಸಿದರು. ಆದರೆ ಪ್ರವಾಸಿ ತಂಡ ಕೊನೆಯಲ್ಲಿ ಉತ್ತಮ ಆಟ ಆಡಲು ವಿಫಲವಾಗಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿದ್ದ ಭಾರತ 3ನೇ ಪಂದ್ಯದ ಅಂತಿಮ-11ರ ಬಳಗಕ್ಕೆ ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ಗೆ ಅವಕಾಶ ನೀಡಿ ಅಚ್ಚರಿಗೊಳಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್(2)ಬೇಗನೆ ಔಟಾದಾಗ ಕ್ರೀಸ್‌ಗೆ ಇಳಿದಿದ್ದ ಮಿಥಾಲಿ 20 ಎಸೆತಗಳಲ್ಲಿ ಔಟಾಗದೆ 24 ರನ್ ಕೊಡುಗೆ ನೀಡಿದರು. ಆದರೆ, ರಾಜ್ ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ ಭಾರತಕ್ಕೆ 4 ರನ್ ಅಗತ್ಯವಿದ್ದಾಗ ಬೌಂಡರಿ ಬಾರಿಸಲು ವಿಫಲರಾದರು. ಭಾರತ 2 ರನ್‌ನಿಂದ ಪಂದ್ಯ ಸೋತಿತು.

ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 16 ರನ್ ಬೇಕಾಗಿತ್ತು. ರಾಜ್ ಹಾಗೂ ದೀಪ್ತಿ ಶರ್ಮಾ(ಔಟಾಗದೆ 21)ಮೊದಲ ಹಾಗೂ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಭಾರತಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವಲ್ಲಿ ವಿಫಲರಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್‌ರ ಅನಿಶ್ಚಿತ ಫಾರ್ಮ್ ತಂಡಕ್ಕೆ ಭಾರೀ ಘಾಸಿಗೊಳಿಸಿತು. 0-3 ಅಂತರದಿಂದ ಸರಣಿ ಸೋತಿದ್ದಕ್ಕೆ ಮಿಥಾಲಿ ಬೇಸರ ವ್ಯಕ್ತಪಡಿಸಿದರು. ಭಾರತ ಈ ಹಿಂದೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದ ಜಯ ಸಾಧಿಸಿತ್ತು. ‘‘ಈ ರೀತಿ ಸರಣಿ ಸೋತಿರುವುದಕ್ಕೆ ತುಂಬಾ ಬೇಸರವಾಗಿದೆ. ನಾವು ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಕೊನೆಯ 10 ಓವರ್ ಬ್ಯಾಟಿಂಗ್‌ನಲ್ಲಿ ಪ್ರಗತಿ ಸಾಧಿಸುವ ಅಗತ್ಯವಿದೆ. ಸ್ಮತಿ ಹಾಗೂ ಜೆಮಿಮಾ ರೊಡ್ರಿಗಸ್ ಅವರ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಪ್ರದರ್ಶನ ಸರಣಿಯಲ್ಲಿ ಭಾರತದ ಧನಾತ್ಮಕ ಅಂಶವಾಗಿದೆ’’ ಎಂದು ಕೌರ್ ಹೇಳಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ 36 ಹಾಗೂ 58 ರನ್ ಗಳಿಸಿದ್ದ ಮಂಧಾನಾ ತನ್ನ ಶ್ರೇಷ್ಠ ಫಾರ್ಮನ್ನು 3ನೇ ಪಂದ್ಯದಲ್ಲೂ ವಿಸ್ತರಿಸಿದರು. ಸರಣಿಯಲ್ಲಿ ಸತತ 2ನೇ ಹಾಗೂ ಒಟ್ಟು 8ನೇ ಅರ್ಧಶತಕ ಸಿಡಿಸಿದ ಮಂಧಾನಾ ಮತ್ತೊಮ್ಮೆ ಕಿವೀಸ್ ಬೌಲರ್‌ಗಳ ಮುಂದೆ ತನ್ನ ಪ್ರಾಬಲ್ಯ ಮೆರೆದರು.

ವನ್-ಡೌನ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್(21) ಕೂಡ ಉತ್ತಮ ಟಚ್‌ನಲ್ಲಿದ್ದು, ಈ ಇಬ್ಬರ ನೆರವಿನಿಂದ ಭಾರತ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತ್ತು. ಆದರೆ, ಆ ಬಳಿಕ ಸ್ಕೋರ್ ಗಳಿಕೆಯಲ್ಲಿ ವೇಗ ಕಳೆದುಕೊಂಡ ಭಾರತ ತಂಡ ನಾಯಕಿ ಕೌರ್ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಅಗತ್ಯದ ರನ್‌ರೇಟ್ ಏರತೊಡಗಿತು. ಮಂಧಾನಾ 16ನೇ ಓವರ್‌ನಲ್ಲಿ ಔಟಾದಾಗ ಭಾರತಕ್ಕೆ 4.3 ಓವರ್‌ಗಳಲ್ಲಿ 39 ರನ್ ಬೇಕಾಗಿತ್ತು. ಈ ಹಂತದಲ್ಲಿ ರಾಜ್ ಹಾಗೂ ದೀಪ್ತಿಗೆ ಹೆಚ್ಚು ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕೊನೆಯ ಓವರ್‌ನಲ್ಲಿ 16 ರನ್ ಗಳಿಸಬೇಕಾದ ಕಠಿಣ ಸವಾಲು ಎದುರಿಸಬೇಕಾಯಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ತಂಡ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 80 ರನ್ ಗಳಿಸಿ ಉತ್ತಮ ಮೊತ್ತ ಗಳಿಸಲು ಬುನಾದಿ ಹಾಕಿತು. ತಿರುಗೇಟು ನೀಡಿದ ಭಾರತ ಆತಿಥೇಯರನ್ನು 7 ವಿಕೆಟ್ ನಷ್ಟಕ್ಕೆ 161 ರನ್‌ಗೆ ನಿಯಂತ್ರಿಸಿತು.

ಹಾರ್ಡ್-ಹಿಟ್ಟಿಂಗ್ ಓಪನರ್ ಸೋಫಿ ಡಿವೈನ್ ಅಗ್ರ ಸ್ಕೋರರ್(52 ಎಸೆತ, 72 ರನ್) ಎನಿಸಿಕೊಂಡರು. ನಾಯಕಿ ಆ್ಯಮಿ ಸಟ್ಟರ್‌ವೇಟ್ 23 ಎಸೆತಗಳಲ್ಲಿ 31 ರನ್ ಕೊಡುಗೆ ನೀಡಿದರು. ಈ ಇಬ್ಬರು 3ನೇ ವಿಕೆಟ್‌ಗೆ 77 ರನ್ ಸೇರಿಸಿ ತಂಡವನ್ನು ಆಧರಿಸಿದರು. ಭಾರತದ ಪರ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ(2-28) ಯಶಸ್ವಿ ಬೌಲರ್ ಎನಿಸಿಕೊಂಡರು. ಪೂನಮ್ ಯಾದವ್, ಮಾನ್ಸಿ ಜೋಶಿ, ರಾಧಾ ಯಾದವ್ ಹಾಗೂ ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News