ಭಾರತ ‘ಎ’-ಇಂಗ್ಲೆಂಡ್ ಲಯನ್ಸ್ ಮೊದಲ ಟೆಸ್ಟ್ ಪಂದ್ಯ ಡ್ರಾ: ಪೋಪ್, ಹೈನ್ ಅರ್ಧಶತಕ

Update: 2019-02-11 03:35 GMT

ವಯನಾಡ್,ಫೆ.10: ಅಂತಿಮ ದಿನವಾದ ರವಿವಾರ ಒಲ್ಲಿ ಪೋಪ್(63) ಹಾಗೂ ಸ್ಯಾಮ್ ಹೈನ್(57) ಅರ್ಧಶತಕದ ಕೊಡುಗೆ ನೆರವಿನಿಂದ ಇಂಗ್ಲೆಂಡ್ ಲಯನ್ಸ್ ತಂಡ ಆತಿಥೇಯ ಭಾರತ ‘ಎ’ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇಲ್ಲಿನ ಕೃಷ್ಣನಗರಿ ಸ್ಟೇಡಿಯಂನಲ್ಲಿ ರವಿವಾರ ನಡೆದ ನಾಲ್ಕನೇ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ 20 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಪರ ಆರಂಭಿಕರಾದ ಬೆನ್ ಡಕೆಟ್(30) ಹಾಗೂ ಮ್ಯಾಕ್ಸ್ ಹೋಲ್ಡನ್(29)12ನೇ ಓವರ್‌ನಲ್ಲಿ 50 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಭಾರತದ ಜಲಜ್ ಸಕ್ಸೇನ ಈ ಜೊತೆಯಾಟವನ್ನು ಬೇರ್ಪಡಿಸಿದರು. ಹೈನ್ ಹಾಗೂ 21ರ ಹರೆಯದ ಪೋಪ್ ಈ ತನಕ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕೆಲವು ಗಂಟೆಗಳ ಕಾಲ ಭಾರತದ ‘ಎ’ ತಂಡದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಈ ಜೋಡಿ 3ನೇ ವಿಕೆಟ್‌ಗೆ 105 ರನ್ ಜೊತೆಯಾಟ ನಡೆಸಿ ಪಂದ್ಯ ಡ್ರಾಗೊಳಿಸಲು ನೆರವಾಯಿತು.

122 ಎಸೆತಗಳನ್ನು ಎದುರಿಸಿದ ಪೋಪ್, ನದೀಮ್‌ಗೆ ವಿಕೆಟ್ ಒಪ್ಪಿಸುವ ಮೊದಲು 10 ಬೌಂಡರಿ ಗಳಿಸಿದರೆ, ಹೈನ್ 178 ಎಸೆತಗಳಲ್ಲಿ 7 ಬೌಂಡರಿ ಬಾರಿಸಿ ತಾಳ್ಮೆಯ ಆಟ ಪ್ರದರ್ಶಿಸಿದರು. ಇಂಗ್ಲೆಂಡ್ ಲಯನ್ಸ್ 14 ರನ್ ಮುನ್ನಡೆಯಲ್ಲಿದ್ದಾಗ ಪಂದ್ಯವನ್ನು ಕೊನೆಗೊಳಿಸಲು ನಿರ್ಧರಿಸಲಾಯಿತು. ದ್ವಿಶತಕ ಸಿಡಿಸಿದ ಭಾರತದ ಆರಂಭಿಕ ಪ್ರಿಯಾಂಕ್ ಪಾಂಚಾಲ್ ‘ಪಂದ್ಯಶ್ರೇಷ್ಠ’ ಗೌರವ ಪಡೆದರು. ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಫೆ.13 ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News