'ಆಪರೇಷನ್ ಕಮಲ’ ಆಡಿಯೋದ ತನಿಖೆ ನಡೆಸಲು ವಿಶೇಷ ತನಿಖಾ ತಂಡ: ಸಿಎಂ ಕುಮಾರಸ್ವಾಮಿ

Update: 2019-02-11 14:40 GMT

ಬೆಂಗಳೂರು, ಫೆ. 11: ‘ಆಪರೇಷನ್ ಕಮಲ’ ಆಡಿಯೋ ಪ್ರಕರಣ ಸಂಬಂಧ ಸ್ಪೀಕರ್ ರಮೇಶ್‌ಕುಮಾರ್ ಅವರ ಸಲಹೆಯಂತೆ ವಿಶೇಷ ತನಿಖಾ ತಂಡವನ್ನು ರಚಿಸಿ, ಹದಿನೈದು ದಿನಗಳ ಒಳಗಾಗಿ ವರದಿ ನೀಡಲು ಸರಕಾರ ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸದನಕ್ಕೆ ಭರವಸೆ ನೀಡಿದರು.

ಸೋಮವಾರ ವಿಧಾನಸಭೆಯಲ್ಲಿ ಆಡಿಯೋ ವಿಚಾರ ಸುದೀರ್ಘ ಚರ್ಚೆ ಮತ್ತು ಸ್ಪೀಕರ್ ರೂಲಿಂಗ್ ನೀಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಸ್ಪೀಕರ್ ಅವರ ಮೇಲೆ ಆರೋಪ ಬಂದಿರುವುದು ಸರಿಯಲ್ಲ. ಹೀಗಾಗಿ ಅವರ ಆದೇಶದಂತೆ ನಿಷ್ಪಕ್ಷಪಾತ ತನಿಖೆಗೆ ಸರಕಾರ ಕೂಡಲೇ ಆದೇಶ ನೀಡಲಿದೆ ಎಂದು ಹೇಳಿದರು.

ಈ ಸದನ ಮತ್ತು ಎಲ್ಲ ಸದಸ್ಯರ ಘನತೆ-ಗೌರವವನ್ನು ಎತ್ತಿಹಿಡಿಯಬೇಕು. ಸ್ಪೀಕರ್ ಅವರಿಗೆ ಅತೀವ ನೋವಾಗಿದ್ದು, ನಮ್ಮ ಮನಸ್ಸಿಗೂ ನೋವಾಗಿದೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಂದಾಗಿನಿಂದ ಪ್ರತಿ ಹಂತದಲ್ಲಿಯೂ ಇಂದು-ನಾಳೆ ಈ ಸರಕಾರ ಉಳಿಯುವುದಿಲ್ಲ ಎಂದು ಗಡುವು ನೀಡಲಾಗುತ್ತಿದೆ ಎಂದು ಹೇಳಿದರು.

ಸರಕಾರ ಅಭದ್ರತೆಯಲ್ಲಿದೆ ಎಂದು ಹೇಳುವ ಮೂಲಕ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ನನಗೆ ಅನಿಸುತ್ತಿದೆ. ಹೀಗಾಗಿ ಇಂತಹ ಎಲ್ಲ ಘಟನೆಗಳಿಗೆ ಇತಿಶ್ರೀ ಹಾಡಬೇಕಾದ ಕಾಲ ಸಮೀಪಿಸಿದೆ. ಹೀಗಾಗಿ ಸಮಗ್ರ ತನಿಖೆ ಮೂಲಕ ಆಡಿಯೋ ಸಂಭಾಷಣೆ ಪ್ರಕರಣದ ಮೂಲ ಬಯಲಾಗಲು ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News