×
Ad

ಉತ್ತಮ ಆರೋಗ್ಯಕ್ಕೆ ಯುನಾನಿ ಚಿಕಿತ್ಸೆ ಸಹಕಾರಿ: ಸಚಿವ ರಹೀಂಖಾನ್

Update: 2019-02-11 18:26 IST

ಬೆಂಗಳೂರು, ಫೆ.11: ಯುನಾನಿ ಹಾಗೂ ಆಯುರ್ವೇದಿಕ್ ಚಿಕಿತ್ಸೆಯಿಂದ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲ. ಉತ್ತಮ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂಖಾನ್ ಹೇಳಿದ್ದಾರೆ.

ಸೋಮವಾರ ಆಯುಷ್ ಇಲಾಖೆಯು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯುನಾನಿ ಉತ್ಸವ ಹಾಗೂ ಹಾಗೂ ಯುನಾನಿ ವೈದ್ಯ ಪದ್ಧತಿ ಬೆಳವಣಿಗೆಗೆ ಶ್ರಮಿಸಿರುವ ಹಕೀಂ ಅಜ್ಮಲ್ ಖಾನ್ ಅವರ 151ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಯುನಾನಿ ಚಿಕಿತ್ಸೆಯಿಂದ ಅಡ್ಡ ಪರಿಣಾಮ ಬೀರುತ್ತವೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. ಶಾಶ್ವತ ಪರಿಹಾರ ಇದೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ತಿಳಿಸಿದರು.

ಬದಲಾದ ಆಹಾರ ಶೈಲಿ ಸೇರಿದಂತೆ ವಿವಿಧ ಕಾರಣಗಳಿಂದ ದಿನಕ್ಕೊಂದು ಬಗೆಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆಲ್ಲಾ ಆಯುರ್ವೇದ ಮತ್ತು ಯುನಾನಿಯಲ್ಲಿ ಶಾಶ್ವತ ಪರಿಹಾರವಿದೆ ಎಂಬುದನ್ನು ವೈದ್ಯರು ಹಾಗೂ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸುವ ಮೂಲಕ ದೇಶೀ ವೈದ್ಯ ಪದ್ಧತಿಯತ್ತ ಗಮನ ಸೆಳೆಯಬೇಕಿದೆ ಎಂದರು.

ಆಧುನಿಕ ಕಾಲಘಟ್ಟದಲ್ಲಿ ಯುವ ಸಮುದಾಯ ಮೊಬೈಲ್‌ಗಳಲ್ಲಿ ಬರುವ ಗೇಮ್‌ಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಆರೋಗ್ಯವಿಲ್ಲದಿದ್ದರೆ, ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ಹೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಆಟದ ಮೈದಾನಗಳಲ್ಲಿ ಆಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸದ್ಯ ಮಾದಕ ವಸ್ತುಗಳ ವ್ಯಸನಿಗಳಾಗಿರುವ ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಸಚಿವರು ಸಲಹೆ ನೀಡಿದರು.

ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವು ಮಂಡಿಸಿದ ಅಧ್ಯಯನ ಪತ್ರಿಕೆಗಳ ಜ್ಞಾನವನ್ನು ವೃತ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬ್ಯಾಚುಲರ್ ಆಫ್ ಯುನಾನಿ ಮೆಡಿಷನ್ ಆ್ಯಂಡ್ ಸರ್ಜರಿ ಕೋರ್ಸ್ ಪೂರೈಸಿದ 47 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಸುಬುದ್ದೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವ ಆಯುಷ್ ವಿದ್ಯಾರ್ಥಿಗಳಿಗೆ 50 ಲಕ್ಷದವರೆಗೆ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳಿಗೆ 1ರಿಂದ 5 ಕೋಟಿ ರೂ.ವರೆಗಿನ ಬಹುಮಾನ ನೀಡಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು.

-ರಹೀಂಖಾನ್, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News