'ಆಪರೇಶನ್' ಆಡಿಯೋ ವಿವಾದ: ಪರಿಷತ್ ಬಾವಿಗೆ ಇಳಿದು ಧರಣಿ ನಡೆಸಿದ ಆಡಳಿತ ಪಕ್ಷದ ಸದಸ್ಯರು

Update: 2019-02-11 14:17 GMT

ಬೆಂಗಳೂರು, ಫೆ.11: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದು, ಈ ಪ್ರಕರಣವನ್ನು ತನಿಖೆ ನಡೆಸಬೇಕು ಹಾಗೂ ಬಿಎಸ್‌ವೈ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ಆಡಳಿತ ಪಕ್ಷದ ಸದಸ್ಯರು ವಿಧಾನ ಪರಿಷತ್‌ನಲ್ಲಿ ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. 

ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ ಅವರು ಸದನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೆರಳಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿಯವರು ಮೊದಲು ನೀವು ರಾಜೀನಾಮೆ ನೀಡಬೇಕೆಂದು ತಿರುಗೇಟು ನೀಡಿದರು. ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ದಾಳಿಯೇ ನಡೆಯಿತು. ಸಭಾಪತಿ ಪ್ರತಾಪ್‌ ಚಂದ್ರಶೆಟ್ಟಿಯವರು ಆರೋಪ ಮತ್ತು ಪ್ರತಿ ಆರೋಪದಲ್ಲಿ ಮುಳುಗಿದ್ದ ಸದಸ್ಯರನ್ನು ಸುಮ್ಮನಿರುವಂತೆ ಮಾಡಿದ ಪ್ರಯತ್ನ ಫಲ ಕೊಡಲಿಲ್ಲ.

ಒಂದು ಹಂತದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ಧಿಕ್ಕಾರದ ಘೊಷಣೆಗಳನ್ನು ಕೂಗಿದರು. ಆಗ ಸಹನೆ ಕಳೆದುಕೊಂಡ ಸಭಾಪತಿಯವರು ಈ ಸದನವನ್ನು ನೀವೇ ನಡೆಸಿಕೊಳ್ಳಿ. ಏನು ಬೇಕಾದರೂ ಮಾತನಾಡಿಕೊಳ್ಳಿ ಎಂದು ಸುಮ್ಮನೆ ಕುಳಿತರು. ಆಗಲೂ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಐವಾನ್ ಡಿಸೋಜ ಅವರು ಪರಸ್ಪರ ವಾಗ್ವಾದದಲ್ಲಿ ನಿರತರಾಗಿದ್ದರು. ಯಡಿಯೂರಪ್ಪ ಅವರು ಕೋಟ್ಯಂತರ ರೂಪಾಯಿ ಆಮಿಷವೊಡ್ಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಡಿಸೋಜ ಮತ್ತೊಮ್ಮೆ ಆಗ್ರಹಪಡಿಸಿದರು. ಆಗ ಸಭಾಪತಿಯವರು ಸದನ ದಿಕ್ಕು ತಪ್ಪುತ್ತಿದ್ದುದನ್ನು ಕಂಡು ಸದನವನ್ನು 5 ನಿಮಿಷಗಳ ಕಾಲ ಮುಂದೂಡಿದರು. ಸದನ ಮತ್ತೆ ಸಮಾವೇಶಗೊಂಡಾಗ ಕಾಂಗ್ರೆಸ್ ಸದಸ್ಯರು ಪ್ರಕರಣವನ್ನು ತನಿಖೆ ನಡೆಸಬೇಕು ಎಂಬ ಪಟ್ಟನ್ನು ಮುಂದುವರೆಸಿದರು. ಸಿಟ್ಟಿಗೆದ್ದ ಸಭಾಪತಿಗಳು ನೀವು ಈ ವಿಷಯ ಪ್ರಸ್ತಾಪಿಸಲು ನೋಟಿಸ್ ನೀಡಿಲ್ಲ. ಹೀಗಾಗಿ, ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದು ಕಾಂಗ್ರೆಸ್ ಸದಸ್ಯರನ್ನು ಸುಮ್ಮನಾಗಿಸುವ ಪ್ರಯತ್ನ ನಡೆಸಿದರು.

ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್, ಐವಾನ್ ಡಿಸೋಜಾ, ಎಚ್.ಎಂ.ರೇವಣ್ಣ , ಜಯಮಾಲಾ ಅವರು ಯಡಿಯೂರಪ್ಪರವರು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಮಾತಿನಂತೆ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಒತ್ತಾಯಿಸಿದರು. ಅಲ್ಲದೆ, ಕಾಂಗ್ರೆಸ್ ಸದಸ್ಯರು, ಜೆಡಿಎಸ್ ಸದಸ್ಯರು ಸಭಾಪತಿ ಅವರು ಪೀಠದ ಮುಂದಿನ ಬಾವಿಯೊಳಗೆ ಇಳಿದು ಧರಣಿ ನಡೆಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಪ್ರತಿ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ಸದಸ್ಯರಿಗೆ ಮಾನ, ಮರ್ಯಾದೆ ಇಲ್ಲ. ತನಿಖೆ ಯಾರು ನಡೆಸಬೇಕು ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಸದನದಲ್ಲಿ ಮತ್ತೆ ಗದ್ದಲ ಕೋಲಾಹಲ, ಉಂಟಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಮತ್ತೆ ಒಂದು ಗಂಟೆಯ ಕಾಲ ಮುಂದೂಡಿದರು. ಮತ್ತೆ ಸದನ 1.15ಕ್ಕೆ ಪ್ರಾರಂಭವಾದಾಗ ಆಡಳಿತ ಪಕ್ಷದ ಸದಸ್ಯರು ಯಡಿಯೂರಪ್ಪ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ಮಾತನಾಡಲು ನಾವು ಸಿದ್ಧವಿದ್ದು, ಈ ಬಗ್ಗೆ ನಿಮಗೆ(ಸಭಾಧ್ಯಕ್ಷರು) ನೋಟಿಸ್ ಕೊಡುತ್ತೇವೆ. ಹೀಗಾಗಿ, ಇಂದು ಮಧ್ಯಾಹ್ನವೇ ಮಾತನಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಭಾಪತಿಗಳು ಮೊದಲು ನೋಟಿಸ್ ಕೊಡಿ ಆಮೇಲೆ ಅದರ ಬಗ್ಗೆ ಪರಿಶೀಲನೆ ನಡೆಸೋಣ ಎಂದು ಹೇಳಿ ಸದನವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News