ಸ್ಪೀಕರ್ ಕಡೆಗೆ ಯಾರೂ ಬೆಟ್ಟು ಮಾಡುವಂತಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

Update: 2019-02-11 14:22 GMT

ಬೆಂಗಳೂರು, ಫೆ. 11: ‘ಸ್ಪೀಕರ್ ರಮೇಶ್‌ ಕುಮಾರ್ ಅವರ ಮೇಲೆ ಎಳ್ಳಷ್ಟು ಸಂಶಯ ಮೂಡಲು ಸಾಧ್ಯವಿಲ್ಲ. ಅವರನ್ನು ಬಹಳ ವರ್ಷಗಳಿಂದ ಹತ್ತಿರದಿಂದ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕ ಬದುಕನ್ನು ನೋಡಿದ್ದು, ಅವರ ಮೇಲೆ ಅಪಾರ ಗೌರವವಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಆಡಿಯೋ ಸಂಭಾಷಣೆಯ ಬಗ್ಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್‌ ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಸದನದ ಗೌರವವನ್ನು ಎತ್ತಿಹಿಡಿಯುವ ಜವಾಬ್ದಾರಿ ಎಲ್ಲ ಸದಸ್ಯರ ಮೇಲಿದೆ ಎಂದರು.

ಈ ವಿಚಾರ ವೈಯಕ್ತಿಕ ಮತ್ತು ಭಾವನಾತ್ಮಕವಲ್ಲ. ಇದರ ಸತ್ಯಾಂಶ ಬೆಳಕಿಗೆ ಬರಬೇಕು. ಶಾಸಕರ ರಾಜೀನಾಮೆ ಒಪ್ಪಿಕೊಳ್ಳಲು 50 ಕೋಟಿ ರೂ.ನೀಡಲಾಗಿದೆ ಎಂಬ ಅಂಶ ಧ್ವನಿಸುರುಳಿಯಲ್ಲಿ ಸ್ಪಷ್ಟವಾಗಿದೆ. ಈ ಆರೋಪದಿಂದ ಹೊರಬರಬೇಕು, ಇದು ಅತ್ಯಂತ ಗಂಭೀರ ವಿಚಾರ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಆರೇಳು ತಿಂಗಳಿನಿಂದ ಏನೇನು ನಡೆಯುತ್ತಿದೆ ಎಂಬುದು ಗೊತ್ತಿದೆ. ಧ್ವನಿ ಸುರುಳಿ ಸಂಭಾಷಣೆ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಪತ್ತೆಹಚ್ಚಬೇಕು. ರಾಜಕೀಯ ದುರದ್ದೇಶದಿಂದ ರಾಜಕೀಯ ಲಾಭಕ್ಕಾಗಿ ಕಪ್ಪು ಚುಕ್ಕೆ ಮೂಡಿಸುವ ಪ್ರಯತ್ನ ನಡೆದಿದೆ. ಯಾವ ಸದಸ್ಯರು ಸ್ಪೀಕರ್ ಕಡೆ ಬೊಟ್ಟು ಮಾಡಿ ತೋರಿಸುವಂತಿಲ್ಲ. ಆ ರೀತಿಯಲ್ಲಿದೆ ನಿಮ್ಮ ಕಾರ್ಯಚಟುವಟಿಕೆ ಎಂದು ಶ್ಲಾಘಿಸಿದರು.

ಬಿಜೆಪಿ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ ಮಾತನಾಡಿ, ಸ್ಪೀಕರ್ ರಮೇಶ್ ಕುಮಾರ್ ಮೇಲೆ ಆರೋಪ ಮಾಡಿರುವ ಧ್ವನಿ ಸುರುಳಿಯ ಸತ್ಯಾಂಶ ಹೊರ ಬರಬೇಕು. ಅಲ್ಲದೆ, ಇದಕ್ಕೆ ಪ್ರೇರಣೆ ಕೊಟ್ಟವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಉಪ್ಪು ತಿಂದವರು ನೀಡು ಕುಡಿಯಲೇಬೇಕು: ಸ್ಪೀಕರ್ ಅವರ ಮೇಲೆ ಲವಲೇಷವೂ ಸಂಶಯವಿಲ್ಲ. ಆದರೆ, ಆಡಿಯೋ ವಿಚಾರದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಇದರಲ್ಲಿ ಸತ್ಯಾಂಶ ಹೊರಬರಬೇಕು ಎಂದು ಬಿಜೆಪಿ ಸದಸ್ಯ ಸುರೇಶ್‌ ಕುಮಾರ್ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಡಿ.ಕೆ.ಶಿವಕುಮಾರ್, ಈ ವಿಚಾರದ ಬಗ್ಗೆ ಭಾವನಾತ್ಮಕ ತೀರ್ಮಾನ ಬೇಡ. ಸಿಎಂ ಪತ್ರವನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಶಾಸಕರನ್ನು ಮಾಧ್ಯಮಗಳಲ್ಲಿ ‘ಕಳ್ಳ ಕಳ್ಳ’ ಎಂಬಂತೆ ಬಿಂಬಿಸುತ್ತಿದ್ದು, ಪ್ರಜಾಪ್ರಭುತ್ವದ ಗೌರವವನ್ನು ಉಳಿಸಬೇಕಿದೆ ಎಂದರು.

‘ಸ್ಪೀಕರ್ ಮೇಲೆ ಆರೋಪ ಹೊರಿಸಿರುವ ಸಂಭಾಷಣೆಯ ಧ್ವನಿಸುರುಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಪೀಕರ್ ಹೆಸರು ಪ್ರಸ್ತಾಪಿಸಿರುವುದು ಪ್ರಜಾಪ್ರಭುತ್ವದ ಹೆಸರಿಗೆ ಕಳಂಕ. ಸ್ಪೀಕರ್ ಕರ್ತವ್ಯ ಪ್ರಜ್ಞೆಯಿಂದ ಮಾರ್ಗದರ್ಶನ ಮಾಡಬೇಕು. ಸದನದ ಗೌರವ, ಪಾವಿತ್ರ್ಯತೆ ಕಾಪಾಡಬೇಕು’ ಎಂದು ಕಾಂಗ್ರೆಸ್ ಸದಸ್ಯ ಎಚ್.ಕೆ.ಪಾಟೀಲ್ ಕೋರಿದರು.

‘ಅಸಲಿಯೋ ನಕಲಿಯೋ? ಸ್ಪೀಕರ್ ಮೇಲೆ ಆರೋಪ ಬಂದಿರುವುದು ಸಲ್ಲ. ಆ ಧ್ವನಿಸುರುಳಿ ಅಸಲಿಯೋ ಅಥವಾ ನಕಲಿಯೋ ಎಂದು ಇತ್ಯರ್ಥ ಆಗಬೇಕು. ಎಲ್ಲವೂ ಹೊರಬರಲು ಸೂಕ್ತ ತನಿಖೆಯಾಗಬೇಕು. ಸದನದ ಹೊರಗೆ ನಡೆದಿರುವ ವಿಚಾರ ಇದು, ಮುಂದೆ ಇಂತಹ ಘಟನೆಗಳು ಮುರುಕಳಿಸದ ರೀತಿ ಸಮಗ್ರ ತನಿಖೆ ಆಗಬೇಕು’

-ಕೆ.ಎಸ್.ಈಶ್ವರಪ್ಪ, ಬಿಜೆಪಿ ಸದಸ್ಯ

‘ಸ್ಪೀಕರ್ ಅವರ ಬಗ್ಗೆ ಆರೋಪ ಮಾಡಿರುವ ವ್ಯಕ್ತಿ ದಾರಿಹೋಕನಲ್ಲ. ಬದಲಿಗೆ ಆತ ಸಂವಿಧಾನಾತ್ಮಕ, ಜವಾಬ್ದಾರಿಯುತ ಸ್ಥಾನದಲ್ಲಿದ್ದಾನೆ ಎಂಬುದು ಸ್ಪಷ್ಟ. ಹೀಗಾಗಿ ಸ್ಪೀಕರ್‌ಗೆ ಅಪಮಾನ ಮಾಡಿದಾರೆ, ಅದು ಇಡೀ ಸದನಕ್ಕೆ ಆದ ಅಪಮಾನ. ಹೀಗಾಗಿ ಸಮಗ್ರ ತನಿಖೆಯಾಗಬೇಕು’

-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News