ಸದನದಲ್ಲಿ ಆಡಿಯೋ ಟೇಪ್ ಬಗ್ಗೆ ತೀವ್ರ ಚರ್ಚೆ: ತುಟಿಬಿಚ್ಚದೆ ಮೌನಕ್ಕೆ ಶರಣಾದ ಯಡಿಯೂರಪ್ಪ

Update: 2019-02-11 14:32 GMT

ಬೆಂಗಳೂರು, ಫೆ. 11: ‘ಆಪರೇಷನ್ ಕಮಲ’ ಆಡಿಯೋ ಪ್ರಕರಣದ ಕುರಿತು ವಿಧಾನಸಭೆ ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆದರೂ, ಯಾವುದೇ ವಿಚಾರಗಳಿಗೆ ಪ್ರತಿಕ್ರಿಯೆ ನೀಡದೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತುಟಿಬಿಚ್ಚದೆ ಮೌನಕ್ಕೆ ಶರಣಾಗಿದ್ದರು.

ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ವಿಷಯ ಪ್ರಸ್ತಾಪಿಸಿ ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸಿದ್ದರು. ಸಚಿವ ಕೃಷ್ಣಭೈರೇಗೌಡ ‘ಆಡಿಯೋ ಸಂಭಾಷಣೆ ನಡೆಸಿದ್ದು ನಾನೇ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ’ ಎಂದು ಉಲ್ಲೇಖಿಸಿದರು.

ಬಳಿಕ ಇದಕ್ಕೆ ಆಕ್ಷೇಪಿಸಿದ ಯಡಿಯೂರಪ್ಪ, ‘ಆಡಿಯೋದಲ್ಲಿರುವ ಮಾತುಗಳನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಸದನದಲ್ಲಿ ಹೇಳಬಾರದು’ ಎಂದು ತಾಕೀತು ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಆಡಳಿತ ಪಕ್ಷದ ಸದಸ್ಯರು ಎಷ್ಟೇ ಪ್ರಚೋದನೆ ನೀಡದರೂ ಬಿಎಸ್‌ವೈ ತುಟಿಬಿಚ್ಚಲಿಲ್ಲ.

ಆಡಿಯೋ ಸಂಭಾಷಣೆಯ ಬಗ್ಗೆ ಬಿಜೆಪಿ ಸದಸ್ಯರೇ ಆಕ್ಷೇಪಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಆದರೂ, ಆಡಿಯೋ ಸಂಭಾಷಣೆಯ ಕೇಂದ್ರ ಬಿಂದು ಯಡಿಯೂರಪ್ಪ ಅತ್ಯಂತ ತಾಳ್ಮೆಯಿಂದ ಒಂದೂ ಮಾತನಾಡದೇ ಮೌನವಾಗಿ ಕುಳಿತಿದ್ದು, ಗಮನ ಸೆಳೆಯಿತು.

ಸದನದಲ್ಲಿ ಸ್ಪೀಕರ್, ಸಭಾನಾಯಕ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕರ ಮಾತಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಯಾವುದೇ ಕ್ಷಣದಲ್ಲಿಯಾದರೂ ಅವರು, ಯಾವುದೇ ವಿಚಾರಗಳಿದ್ದರೂ ಪ್ರತಿಕ್ರಿಯಿಸಲು ಅವಕಾಶವಿರುತ್ತದೆ. ಆದರೆ, ಗಂಭೀರವಾದ ವಿಚಾರ ಚರ್ಚೆ ನಡೆಯುತ್ತಿದ್ದರೂ, ವಿಪಕ್ಷ ನಾಯಕ ಬಿಎಸ್‌ವೈ ,ಮೌನವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News