ಬಿಬಿಎಂಪಿ ಬಜೆಟ್ ದಿನಾಂಕ ಮುಂದೂಡಿಕೆ ?

Update: 2019-02-11 15:14 GMT

ಬೆಂಗಳೂರು, ಫೆ. 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಫೆ.15 ರಂದು ಮಂಡಿಸಲು ಉದ್ದೇಶಿಸಿದ್ದ ಪ್ರಸಕ್ತ ಸಾಲಿನ ಬಜೆಟ್ ದಿನಾಂಕ ಮುಂದೂಡಿ, ಫೆ.25 ಅಥವಾ ಫೆ.27 ರಂದು ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸಕ್ತ ವರ್ಷದಲ್ಲಿ ಲೋಕಸಭಾ ಚುನಾವಣೆಗಳು ನಡೆಯುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಲವಾರು ಯೋಜನೆಗಳು ಘೋಷಿಸಿದ್ದರಿಂದ ಪಾಲಿಕೆಯೂ ಜನಪ್ರಿಯ ಯೋಜನೆಗಳ ಘೋಷಣೆಗೆ ಮುಂದಾಗಿದೆ. ಹೀಗಾಗಿ, ಪ್ರಸಕ್ತ ವರ್ಷದ ಪಾಲಿಕೆಯ ಬಜೆಟ್ 10 ಸಾವಿರ ಕೋಟಿ ರೂ.ಗೆ ದಾಟುವ ನಿರೀಕ್ಷೆಯಿದೆ.

ಈ ಹಿಂದೆ ಸಿದ್ಧಪಡಿಸಿದ್ದ ಬಜೆಟ್ ಅನ್ನು ಮತ್ತೊಂದು ಬಾರಿ ತಿದ್ಧುಪಡಿ ಮಾಡಬೇಕಾಗಿರುವುದರಿಂದ ಇನ್ನೂ 10 ದಿನಗಳ ಸಮಯ ಬೇಕಾಗಿದೆ. ಹೀಗಾಗಿ, ಬಜೆಟ್ ದಿನಾಂಕ ಮುಂದೂಡಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ನಿರ್ಧರಿಸಿದೆ.

ಫೆ.20ರಿಂದ 24ವರೆಗೆ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಆ ಬಳಿಕ ಬಜೆಟ್ ಮಂಡಿಸಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಚಿಂತನೆ ನಡೆಸಿದೆ. ಹೀಗಾಗಿ ಫೆ.25 ಅಥವಾ 27ರಂದು ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜ್ಯ ಸರಕಾರದ ಬಜೆಟ್ ಮಂಡನೆಯಾದ ಹಿನ್ನೆಲೆಯಲ್ಲಿ ಪಾಲಿಕೆಯ ಬಜೆಟ್ ಮಂಡನೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಮುಂದಾಗಿದ್ದು, ಈಗಾಗಲೇ ಪಾಲಿಕೆಯ ಆಯುಕ್ತರು 8,300 ಕೋಟಿ ರೂ. ಮೊತ್ತದ ಕರಡು ಆಯವ್ಯಯವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷರು ವಿವಿಧ ಸ್ಥಾಯಿ ಸಮಿತಿ ಹಾಗೂ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರದ ಶಾಸಕರು, ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ಬಳಿಕ ಬಜೆಟ್ ಗಾತ್ರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅದರಂತೆ ಕರಡು ಬಜೆಟ್‌ಗೆ ಕನಿಷ್ಠ 2,000 ಕೋಟಿ ರೂ. ನಿಂದ 2,500 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಸಿದ್ಧಪಡಿಸಲು ಸ್ಥಾಯಿ ಸಮಿತಿ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News