ಆಪರೇಷನ್ ಆಡಿಯೋ ಚರ್ಚೆ ಬೇಕೆ ಬೇಡವೇ?: ವಿಧಾನಪರಿಷತ್‌ ನಲ್ಲಿ ಮೂಡದ ಒಮ್ಮತ

Update: 2019-02-11 15:21 GMT

ಬೆಂಗಳೂರು, ಫೆ.11: ಆಪರೇಷನ್ ಆಡಿಯೋ ಪ್ರಕರಣವನ್ನು ಸದನದಲ್ಲಿ ಚರ್ಚೆ ಮಾಡಬೇಕೆ, ಬೇಡವೆ ಎಂಬುದರ ಕುರಿತು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆದ ಘಟನೆ ವಿಧಾನಪರಿಷತ್‌ನಲ್ಲಿ ನಡೆಯಿತು.

ಸೋಮವಾರ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ, ಆಪರೇಷನ್ ಆಡಿಯೋ ಪ್ರಕರಣ ಶಾಸಕಾಂಗ, ನ್ಯಾಯಾಂಗಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಹೀಗಾಗಿ ಇದರ ಸತ್ಯಾಸತ್ಯತೆಗಳ ಕುರಿತು ನಿಯಮ 342 ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬೇರೆ ವಿಷಯಗಳ ಚರ್ಚೆಗೆ ಅವಕಾಶ ಕೊಡಬಾರದು. ಹಾಗೂ ಇದೊಂದು ವಿಶೇಷ ಪ್ರಕರಣವಾಗಿರುವುದರಿಂದ ಕೆಳ ಮನೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿದ್ದು, ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದೆ. ಪುನಃ ಈ ವಿಷಯವನ್ನು ಪರಿಷತ್‌ನಲ್ಲಿ ಚರ್ಚೆಸುವ ಅಗತ್ಯವಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ತಿರಸ್ಕರಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಐವಾನ್ ಡಿಸೋಜ, ಆಪರೇಷನ್ ಆಡಿಯೋ ಪ್ರಕರಣ ಕೇವಲ ಒಂದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಇಡೀ ಶಾಸಕರ ಚಾರಿತ್ರಕ್ಕೆ ಮಸಿ ಬಳಿಯುವಂತಹದ್ದು. ಇದರಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಪೀಠದ ಮೇಲೆಯೂ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ನಾವು ಜವಾಬು ಕೊಡಬೇಕಾಗಿರುವುದರಿಂದ ಈ ವಿಷಯ ಕುರಿತು ಚರ್ಚೆಗೆ ಅವಕಾಶ ಕೊಡುವುದೆ ಸೂಕ್ತವೆಂದು ಪಟ್ಟುಹಿಡಿದರು.

ಬಿಜೆಪಿ ಹಿರಿಯ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಆಡಿಯೋ ಪ್ರಕರಣದಲ್ಲಿ ವಿಧಾನ ಸಭಾಧ್ಯಕ್ಷರ ಮೇಲೆ ಆರೋಪ ಇರುವುದರಿಂದ ಆ ವಿಷಯವನ್ನು ಇಲ್ಲಿ ಚರ್ಚೆ ನಡೆಸುವುದು ಸರಿಯಲ್ಲ. ಈಗಾಗಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ಮನೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ. ಪುನಃ ವಿಧಾನಪರಿಷತ್‌ನಲ್ಲಿ ಚರ್ಚೆ ನಡೆದು ಪ್ರಕರಣಕ್ಕೆ ಮತ್ತೊಂದು ತಿರುವು ಪಡೆಯುವುದು ಒಳ್ಳೆಯ ಲಕ್ಷಣವಲ್ಲವೆಂದರು. ಇವರ ಮಾತಿಗೆ ವಿರೋಧ ಪಕ್ಷದ ಸದಸ್ಯರು ಧ್ವನಿಗೂಡಿಸಿದರು.

ವಿರೋಧ ಪಕ್ಷದ ಸದಸ್ಯರ ವಿರೋಧಕ್ಕೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿ, ಆಪರೇಷನ್ ಆಡಿಯೋ ಪ್ರಕರಣದ ಕುರಿತು ಕೆಳ ಮನೆಯಲ್ಲಿ ಪಕ್ಷ ಭೇದ ಮರೆತು ಮಾತನಾಡಿದ್ದಾರೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೆ ಪಕ್ಷದ ಸದಸ್ಯರ ಹೆಸರನ್ನು ಉಲ್ಲೇಖಿಸಿ ಆರೋಪ ಮಾಡಿಲ್ಲ. ಇದೇ ಮಾದರಿಯಲ್ಲಿ ಪರಿಷತ್‌ನಲ್ಲೂ ಅವಕಾಶ ಕಲ್ಪಿಸಬೇಕೆಂದರು. ಇದಕ್ಕೆ ಆಡಳಿತ ಪಕ್ಷದ ಬೋಜೇಗೌಡ, ಬಸವರಾಜ ಹೊರಟ್ಟಿ ಸೇರಿದಂತೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು.

ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಮಾತನಾಡಿ, ಕೆಳ ಮನೆಯಲ್ಲಿ ಆಪರೇಷನ್ ಆಡಿಯೋ ಕುರಿತು ನಡೆದ ಚರ್ಚೆ ಮಾದರಿಯಾಗುವಂತಹದ್ದು. ಪಕ್ಷಭೇದ ಮರೆತು ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದು ಉಚಿತವಲ್ಲವೆಂದರು. ಅಂತಿಮವಾಗಿ ಸಭಾಪತಿ ಪ್ರತಾಪ್‌ ಚಂದ್ರಶೆಟ್ಟಿ ಮಾತನಾಡಿ, ಆಡಿಯೋ ಪ್ರಕರಣ ವಿಧಾನಪರಿಷತ್‌ನಲ್ಲಿ ಚರ್ಚೆಸಬೇಕೆ, ಬೇಡವೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಸದನವನ್ನು ನಾಳೆಗೆ(ಮಂಗಳವಾರ) ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News