"ಸಭಾಧ್ಯಕ್ಷರೇ..ನೀವು ಸೀತೆ ಆಗಬೇಡಿ, ಶ್ರೀರಾಮ ಆಗಿ"

Update: 2019-02-11 15:49 GMT

ಬೆಂಗಳೂರು, ಫೆ. 11: ‘ಆಪರೇಷನ್ ಕಮಲ’ ಆಡಿಯೋ ಸಂಭಾಷಣೆಯ ವಿಚಾರ ವಿಧಾನಸಭೆಯಲ್ಲಿ ಗಂಭೀರ ಸ್ವರೂಪದ ಚರ್ಚೆ ನಡೆಯುತ್ತಿರುವುದರ ಮಧ್ಯೆಯೇ ‘ರಾಮಾಯಣ, ರಮೇಶ್‌ ಕುಮಾರಾಯಣ, ಸೀತೆ ಆಗಬೇಡಿ, ಶ್ರೀರಾಮ ಆಗಿ’ ಎಂಬ ಮಾತುಗಳು ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ನಾಂದಿಯಾಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೆಗೌಡ, ‘ಸೀತೆಯ ಬಗ್ಗೆ ಸಾಮಾನ್ಯ ವ್ಯಕ್ತಿ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶ್ರೀರಾಮ ಸೀತೆಯ ಪಾವಿತ್ರತೆ ಪರೀಕ್ಷೆಗೊಡ್ಡಿದ್ದರು. ಹೀಗಾಗಿ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯರೊಬ್ಬರು ‘ರಾಮಾಯಣ ಕಾಲ್ಪನಿಕ’ ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ ಕುಮಾರ್, ರಾಮಾಯಣ ಬೇಡ. ಇಲ್ಲಿ ರಮೇಶ್‌ ಕುಮಾರಾಯಣ ಮೊದಲು ಮುಕ್ತಾಯವಾಗಲಿ ಎಂದು ಹಾಸ್ಯದ ದಾಟಿಯಲ್ಲೇ ವಿಷಯದ ಗಂಭೀರತೆಯನ್ನು ತಿಳಿಸಿದರು.

ಈ ವೇಳೆ ಎದ್ದುನಿಂತ ಬಿಜೆಪಿಯ ಮಾಧುಸ್ವಾಮಿ, ಸಭಾಧ್ಯಕ್ಷರೇ ನೀವು ಸೀತೆ ಆಗಬೇಡಿ, ಶ್ರೀರಾಮ ಆಗಬೇಕು. ಸೀತೆಯ ಪಾವಿತ್ರತೆ ಪರೀಕ್ಷೆಗೆ ಆಕೆಯನ್ನು ಬೆಂಕಿಗೆ ದೂಡಿದಂತೆ ನಿಮ್ಮನ್ನು ಬೆಂಕಿಗೆ ದೂಡಲು ಇಂದು ಸಾಧ್ಯವಿದೆ. ಹೀಗಾಗಿ ಆಡಿಯೋ ಸಂಭಾಷಣೆ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಕಷ್ಟ ಬಂದ್ರೆ ನೀವು ಬೇಕಲ್ಲಪ್ಪ ನನಗೆ: ಚರ್ಚೆಗೆ ಅವಕಾಶ ಕೋರಿ ಸಚಿವ ಡಿ.ಕೆ.ಶಿವಕುಮಾರ್ ಎದ್ದುನಿಂತ ಕೂಡಲೇ ಸ್ಪೀಕರ್ ರಮೇಶ್‌ ಕುಮಾರ್ ‘ನಾನು ನಿಮ್ಮ ಪರವಾಗಿದ್ದೇನೆ, ಕೆ.ಜಿ.ಬೋಪಯ್ಯ ಮಾತನಾಡಿದ ಬಳಿಕ ನಿಮಗೆ ಅವಕಾಶ ನೀಡುತ್ತೇನೆ’ ಎಂದರು.

ಇದೆ ವೇಳೆ ಎದ್ದುನಿಂತ ಬಿಜೆಪಿ ಸದಸ್ಯ ಸುರೇಶ್‌ ಕುಮಾರ್, ನೀವು (ಸ್ಪೀಕರ್ ಕುರಿತು) ಡಿ.ಕೆ.ಶಿವಕುಮಾರ್ ಪರ ನಿಂತರೆ, ನಾವು ನಿಮ್ಮ ಪರವಾಗಿದ್ದೇವೆ’ ಎಂದರು. ಕೂಡಲೇ ಪ್ರತಿಕ್ರಿಯಿಸಿದ ರಮೇಶ್‌ ಕುಮಾರ್, ‘ಕಷ್ಟ ಬಂದ್ರೆ ಯಾರಾದರೂ ಒಬ್ಬರು ಬೇಕಲ್ಲಪ್ಪ ನನಗೆ’ ಎಂದು ಶಿವಕುಮಾರ್ ಅವರನ್ನು ನೋಡುತ್ತ ನಗುಬೀರಿದರು.

ಈ ಹಂತದಲ್ಲಿ ಬಿಜೆಪಿ ಸದಸ್ಯರೊಬ್ಬರು, ಸ್ಪೀಕರ್ ಅವರನ್ನು ಕುರಿತು ‘ನೀವು ಶ್ರೀಮಂತರಲ್ಲ, ಆದರೆ, ನಿಮ್ಮ ಒಡನಾಟದಲ್ಲಿ ಹಲವು ಮಂದಿ ಶ್ರೀಮಂತರಂತೂ ಇದ್ದಾರೆ’ ಎಂದು ಚಟಾಕಿ ಹಾರಿಸಿದ್ದು, ಸದನದಲ್ಲಿ ನಗೆಯ ಅಲೆಯನ್ನು ಉಕ್ಕಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News