ಹುಲಿ, ಚಿರತೆ ಉಗುರು ಮಾರಾಟ: ಮೂವರ ಬಂಧನ

Update: 2019-02-11 16:00 GMT

ಬೆಂಗಳೂರು, ಫೆ.11: ಹುಲಿ ಮತ್ತು ಚಿರತೆ ಉಗುರುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸುವಲ್ಲಿ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಗಮಂಗಲದ ಕವಿತ್ ಕುಮಾರ್(23), ಗೋಪಿ(25) ಹಾಗೂ ಸಂಜಯ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 142 ಹುಲಿ ಹಾಗೂ ಚಿರತೆ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಆರೋಪಿಗಳು ಹುಣಸೂರಿನ ಪಕ್ಷಿರಾಜಪುರದ ವ್ಯಕ್ತಿಯೊಬ್ಬನಿಂದ ಹುಲಿ ಹಾಗೂ ಚಿರತೆ ಉಗುರುಗಳನ್ನು ಖರೀದಿಸಿಕೊಂಡು ಯಶವಂತಪುರದ ಹೂವಿನ ಮಾರುಕಟ್ಟೆಯ ಬಸ್ ನಿಲ್ದಾಣದ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳಿಗೆ ಮಾರಾಟ ಮಾಡಿದ್ದ ಪಕ್ಷಿರಾಜಪುರದ ವ್ಯಕ್ತಿಯ ಮಾಹಿತಿ ಪಡೆದಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹುಲಿ ಹಾಗೂ ಚಿರತೆಗಳ ಉಗುರುಗಳನ್ನು ಉಂಗುರ ಹಾಗೂ ಸರಗಳಿಗೆ ಬಳಸುತ್ತಿದ್ದು, ಅವುಗಳನ್ನು ಧರಿಸಿದರೆ, ಅದೃಷ್ಟ ಬರುತ್ತದೆ ಎನ್ನುವ ನಂಬಿಕೆ ಇದೆ.

ಇದರಿಂದಾಗಿ ಸಾರ್ವಜನಿಕರು ಹುಲಿ ಹಾಗೂ ಚಿರತೆಗಳ ಉಗುರುಗಳನ್ನು ಹೆಚ್ಚಿನ ಹಣಕೊಟ್ಟು ಖರೀದಿಸುತ್ತಿದ್ದು, ಅದನ್ನು ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿಗಳು ಈ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News