ವಿಶ್ವೇಶ್ವರಯ್ಯ ಬಡಾವಣೆಯ ಅಭಿವೃದ್ಧಿಗೆ ಮೀಸಲಿಟ್ಟ 530 ಕೋಟಿ ಅವ್ಯವಹಾರ: ಸಿಟಿಜನ್ ಫೋರಂ ಆರೋಪ

Update: 2019-02-11 16:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.11: ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದು, ಬಡಾವಣೆಯ ಅಭಿವೃದ್ಧಿಗೆ ಮೀಸಲಿಟ್ಟ 530 ಕೋಟಿ ರೂ. ಗಳ ಅವ್ಯವಹಾರ ನಡೆದಿದೆ ಎಂದು ಸರ್.ಎಂ.ವಿಶ್ವೇಶ್ವರಯ್ಯ ಸಿಟಿಜನ್ ಫೋರಂ ಗಂಭೀರ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಅಧ್ಯಕ್ಷ ಎನ್.ನಂಜೇಗೌಡ, ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಗೆ ಹೊಂದಿಕೊಂಡಂತೆ 1800 ಎಕರೆಯಲ್ಲಿ ಬಿಡಿಎ ನಿರ್ಮಿಸಿರುವ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 1ರಿಂದ 9 ರವರೆಗೆ ಬ್ಲಾಕ್‌ಗಳಿದ್ದು, 2,500 ಕುಟುಂಬಗಳು ನೆಲೆಸಿವೆ. ಅದರಲ್ಲಿ 1ನೇ ಬ್ಲಾಕ್‌ನಲ್ಲಿ 250 ಕುಟುಂಬಗಳು ವಾಸಿಸುತ್ತಿದ್ದು, ಅಲ್ಲಿನ ನಾಗರಿಕರು ಸರಕಾರದ ನಿರ್ಲಕ್ಷದಿಂದಾಗಿ ಉಸಿರುಗಟ್ಟುವ ಪರಿಸರದಲ್ಲಿ ಪ್ರತಿ ದಿನ ಜೀವ ಭಯದಿಂದ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರವು ಈ ಬಡಾವಣೆಯ ಅಭಿವೃದ್ಧಿಗೆ 530 ಕೋಟಿ ರೂ. ನೀಡಿದ್ದರೂ 1ನೇ ಬ್ಲಾಕ್‌ನಲ್ಲಿ ಶೇ.80 ರಷ್ಟು ಕೆಲಸ ಮಾಡಿಲ್ಲ. ಹಣ ದುರುಪಯೋಗ, ಭ್ರಷ್ಟಾಚಾರ ನಡೆದಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸರಕಾರವು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದರು. ಇನ್ನು, ಬಡಾವಣೆಯ ಮುಖ್ಯರಸ್ತೆ ಮತ್ತು ಅಡ್ಡರಸ್ತೆಯ ಪಕ್ಕದಲ್ಲಿ ಗಿಡ-ಗಂಟಿ, ಪೊದೆಗಳು ದಟ್ಟವಾಗಿ ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ. ಹಾವು, ಚೇಳುಗಳು ಮನೆಗೆ ನುಗ್ಗುತ್ತಿವೆ. ಆದ್ದರಿಂದ ಮಕ್ಕಳು ಭಯದಿಂದ ತಿರುಗಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮನವಿ ಪತ್ರ ಕೊಳೆಯುತ್ತಿದೆ: ಬಡಾವಣೆಯ ಕೆಲವು ಭಾಗಗಳಲ್ಲಿ ಬಸ್ ತಂಗುದಾಣದ ವ್ಯವಸ್ಥೆ ಮಾಡಬೇಕು ಎನ್ನುವ ನಮ್ಮ ಮನವಿ ಪತ್ರ ಬಿಎಂಟಿಸಿ ಕಚೇರಿಯಲ್ಲಿ ಕೊಳೆಯುತ್ತಾ ಬಿದ್ದಿದೆಯೇ ಹೊರತು, ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದು ಬಡಾವಣೆ ಜನರು ನೋವಿನಿಂದ ವಿವರಿಸಿದರು.

ಸರ್.ಎಂ.ವಿಶ್ವೇಶ್ವರಯ್ಯ ಸಿಟಿಜನ್ ಫೋರಂ ವತಿಯಿಂದ ಬಿಡಿಎ ಆಯುಕ್ತರಿಗೆ, ವಿದ್ಯುತ್ ಇಲಾಖೆ, ಆರೋಗ್ಯಾಧಿಕಾರಿ, ಅರಣ್ಯ, ಸಾರಿಗೆ, ಪೊಲೀಸ್ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಸವಿವರವಾಗಿ ಸಮಸ್ಯೆಗಳನ್ನು ವಿವರಿಸಿ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

-ಎನ್.ನಂಜೇಗೌಡ, ಸರ್.ಎಂ.ವಿಶ್ವೆೀಶ್ವರಯ್ಯ ಸಿಟಿಜನ್ ಫೋರಂ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News