ಬೆಂಗಳೂರು ಕೇಂದ್ರ ವಿವಿ: ಪಿಎಚ್‌ಡಿಗೆ ಸಾವಿರಕ್ಕೂ ಅಧಿಕ ಅರ್ಜಿಗಳು ಸ್ವೀಕಾರ

Update: 2019-02-11 17:12 GMT

ಬೆಂಗಳೂರು, ಫೆ.11: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಮೊದಲ ಬಾರಿಗೆ ಆಹ್ವಾನಿಸಿದ್ದ ಪಿಎಚ್‌ಡಿಗೆ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಅರ್ಜಿಗಳು ಸ್ವೀಕಾರಗೊಂಡಿವೆ.

ಕೇಂದ್ರ ವಿಶ್ವವಿದ್ಯಾಲಯದ ಪಿಎಚ್‌ಡಿ ಅನುಮತಿ ಗೊಂದಲದ ಮಧ್ಯೆಯೇ ಪಿಎಚ್‌ಡಿಗಾಗಿ ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ. ವಿವಿಯಲ್ಲಿ ಪ್ರಸ್ತುತ ಲಭ್ಯವಿರುವ 139 ಸೀಟುಗಳಿಗೆ 1,114 ಅರ್ಜಿಗಳು ಸ್ವೀಕೃತವಾಗಿದೆ. ಮೂಲ ವಿಶ್ವವಿದ್ಯಾಲಯ ಕಳೆದೆರಡು ವರ್ಷಗಳಿಂದ ಪಿಎಚ್‌ಡಿಗೆ ಅರ್ಜಿ ಆಹ್ವಾನಿಸದಿರುವುದೇ ಅರ್ಜಿ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.

2013ರ ಅಧಿಸೂಚನೆ ಪ್ರಕಾರ ಪಿಎಚ್‌ಡಿಗೆ ಅಧಿಸೂಚನೆ ಹೊರಡಿಸಿರುವುದಾಗಿ ಬೆಂಗಳೂರು ಕೇಂದ್ರ ವಿವಿ ತಿಳಿಸಿದೆ. ಆದರೆ, ಆ ಸಮಯದಲ್ಲಿ ಇನ್ನೂ ವಿವಿ ಆರಂಭ ಆಗಿರಲಿಲ್ಲ. ಅಲ್ಲದೆ, ಪಿಎಚ್‌ಡಿ ಅಧಿಸೂಚನೆ ಹೊರಡಿಸುವ ಮುನ್ನ ರಾಜ್ಯಪಾಲರಿಂದ ಅನುಮತಿ ಪಡೆಯಬೇಕಿದೆ. ಆದರೆ, ಸೆಂಟ್ರಲ್ ವಿವಿ ಅನುಮತಿ ಪಡೆದಿಲ್ಲವೆಂದು ತಿಳಿದು ಬಂದಿದೆ.

ಸರಕಾರದ ಅನುಮತಿ ಇಲ್ಲದೆ ಪಿಎಚ್‌ಡಿಗೆ ಅರ್ಜಿ ಆಹ್ವಾನಿಸಿ ಕೊನೆಯ ಕ್ಷಣದಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮಾನ್ಯತೆ ರದ್ದು ಮಾಡಿದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಮೂಲ ವಿವಿಯ 2016 ಅಧಿಸೂಚನೆಗೆ ಜ.25ರಂದು ರಾಜ್ಯಪಾಲರಿಂದ ಅನುಮತಿ ಸಿಕ್ಕಿದೆ. ಆದರೆ, ಕೇಂದ್ರ ವಿವಿ ಪಿಎಚ್‌ಡಿ ಅಧಿಸೂಚನೆ ಹೊರಡಿಸಿರುವುದು ಜ.3. ಹೀಗಾಗಿ ಪಿಎಚ್‌ಡಿಗೆ ಅನುಮತಿಗೆ ಹಲವಾರು ಗೊಂದಲಗಳನ್ನು ಹುಟ್ಟುಹಾಕಿದೆ.

ಕೇಂದ್ರ ವಿಶ್ವವಿದ್ಯಾಲಯದಲ್ಲಿ 18 ಕೋರ್ಸ್‌ಗಳಿಂದ 139 ಸೀಟುಗಳು ಲಭ್ಯ ಇವೆ. ಈ ಸೀಟುಗಳ ಭರ್ತಿಗೆ 1,114 ಅರ್ಜಿಗಳು ಸ್ವೀಕಾರಗೊಂಡಿದ್ದು, ವಾಣಿಜ್ಯ ವಿಭಾಗದಲ್ಲಿ 491 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಲಭ್ಯವಿರುವ ಸೀಟುಗಳ ಸಂಖ್ಯೆ ಕೇವಲ 36. ಇದರಿಂದ ಪೈಪೋಟಿ ಹೆಚ್ಚಾಗಿದೆ.

ಶೀಘ್ರದಲ್ಲೇ ಬೆಂವಿವಿ ಅರ್ಜಿ ಆಹ್ವಾನ: ಹೊಸ ಅಧಿಸೂಚನೆಗೆ ರಾಜ್ಯಪಾಲರು ಅನುಮತಿ ನೀಡುವುದು ಬಾಕಿ ಇದ್ದರಿಂದ ಬೆಂಗಳೂರು ವಿಶ್ವವಿದ್ಯಾಲಯ ಕಳೆದೆರಡು ವರ್ಷಗಳಿಂದ ಪಿಎಚ್‌ಡಿಗೆ ಅರ್ಜಿ ಆಹ್ವಾನಿಸಿರಲಿಲ್ಲ. ಆದರೆ, ಇದೀಗ ಅನುಮತಿ ಸಿಕ್ಕಿದ್ದು, ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News