ಪರಿಷತ್ ಕಲಾಪಕ್ಕೆ ಹೊಸ ಅತಿಥಿಯ ಆಗಮನ !

Update: 2019-02-11 17:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.11: ಪರಿಷತ್ತಿನ ಕಲಾಪಕ್ಕೆ ಸೋಮವಾರ ಹೊಸ ಅತಿಥಿಯೊಂದು ಬಂದಿತ್ತು. ಆದರೆ, ಈ ಅತಿಥಿಗೆ ಆಡಳಿತ ಅಥವಾ ವಿರೋಧ ಪಕ್ಷ ಎಂಬ ಯಾವುದೇ ಗೆರೆಗಳು ಇರಲಿಲ್ಲ. ಕಂಡಕಡೆಗಳಲ್ಲೆಲ್ಲಾ ಹೋಗಿ ಭೇಟಿ ನೀಡಿದ್ದು ವಿಶೇಷವಾಗಿತ್ತು.

ಆ ಆಕಸ್ಮಿಕ ಅತಿಥಿ ಪಾರಿವಾಳ. ಸದನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕಿಳಿದಿದ್ದರೆ, ಅವರ ತಲೆಯ ಮೇಲೆ ಈ ಪಾರಿವಾಳ ಹಾರಾಟ ನಡೆಸಿತ್ತು. ಒಮ್ಮೆ ಆಡಳಿತ ಪಕ್ಷದ ಪರ ಮತ್ತೊಮ್ಮೆ ಪ್ರತಿಪಕ್ಷದ ಪರವಾಗಿ ಕೆಲಹೊತ್ತು ನಿಂತು ‘ಟಕಮಕ’ ನೋಡುತ್ತಿತ್ತು. ಮತ್ತೊಮ್ಮೆ ಇವರ್ಯಾರ ಸಂಗ ಬೇಡವೆಂದು ಪ್ರೇಕ್ಷಕರ ಗ್ಯಾಲರಿ ಕಡೆಗೆ ಹಾರಿ ಕುಳಿತುಕೊಳ್ಳುತ್ತಿತ್ತು. ಅಂದಹಾಗೆ ಇದೇ ಮೊದಲ ಬಾರಿಗೆ ಈ ಅತಿಥಿ ಕಲಾಪದಲ್ಲಿ ಕಾಣಿಸಿಕೊಂಡಿದ್ದು, ಬೆಳಗ್ಗೆ ಸಭಾಂಗಣ ಸ್ವಚ್ಛಗೊಳಿಸುವಾಗ ನುಸುಳಿರುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾರ್ಷಲ್‌ಗಳು ಮಾಹಿತಿ ನೀಡಿದರು.

ಅಲ್ಲಿ ಕಾವೇರುತ್ತಿದ್ದ ಚರ್ಚೆಯನ್ನು ನೋಡಿ, ಅದು ಹೊರಹೋಗಲು ದಾರಿಯನ್ನು ಹುಡುಕುತ್ತಿರುವಂತೆ ಕಂಡುಬಂತು. ಆದರೆ, ದಾರಿ ಕಾಣದೆ ಮೂಲೆಯಲ್ಲಿ ಗುಟುರು ಹಾಕುತ್ತ ಕುಳಿತುಕೊಂಡಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಕಲಾಪವನ್ನು ಮುಂದೂಡಲಾಯಿತು. ಆಗ, ಮಾರ್ಷಲ್‌ಗಳು ಪಾರಿವಾಳವನ್ನು ಹೊರಹಾಕುವ ಕೆಲಸದಲ್ಲಿ ನಿರತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News