ವಿಂಡೀಸ್ ಮೇಲೆ ಆಂಗ್ಲರ ಬಿಗಿ ಹಿಡಿತ

Update: 2019-02-11 18:30 GMT

ಸೈಂಟ್‌ಲೂಸಿಯಾ, ಫೆ.11: ಮಾರ್ಕ್ ವುಡ್ ಮೊದಲ ಬಾರಿ ಕಬಳಿಸಿದ ಐದು ವಿಕೆಟ್ ಗೊಂಚಲು ನೆರವಿನಿಂದ ಇಂಗ್ಲೆಂಡ್ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ. 2ನೇ ದಿನವಾದ ರವಿವಾರ ಡರೆನ್ ಸಮ್ಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 41 ರನ್‌ಗೆ 5 ವಿಕೆಟ್‌ಗಳನ್ನು ಉರುಳಿಸಿದ ವುಡ್ ವೆಸ್ಟ್ ಇಂಡೀಸ್‌ನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 154 ರನ್‌ಗೆ ನಿಯಂತ್ರಿಸಿದರು. ಆಂಗ್ಲರಿಗೆ ಮೊದಲ ಇನಿಂಗ್ಸ್‌ನಲ್ಲಿ 123 ರನ್ ಮುನ್ನಡೆ ಒದಗಿಸಿಕೊಟ್ಟರು.

ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. 2ನೇ ದಿನದಾಟದಲ್ಲಿ ಒಟ್ಟು 16 ವಿಕೆಟ್‌ಗಳು ಪತನಗೊಂಡಿದ್ದು, ಇಂಗ್ಲೆಂಡ್ ಒಟ್ಟು 142 ರನ್ ಮುನ್ನಡೆಯಲ್ಲಿದೆ. ಈ ಸರಣಿಯಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದ ವುಡ್ ಗಂಟೆಗೆ 145 ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡಿದರು. ಸತತ ಎಸೆತಗಳಲ್ಲಿ ಅಗ್ರ ಕ್ರಮಾಂಕದ ಶೈ ಹೋಪ್(1) ಹಾಗೂ ರೋಸ್ಟನ್ ಚೇಸ್(0) ವಿಕೆಟನ್ನು ಕಬಳಿಸಿದರು. ಹ್ಯಾಟ್ರಿಕ್ ವಿಕೆಟ್ ಗಳಿಸಲು ವುಡ್‌ಗೆ ಸಾಧ್ಯವಾಗಲಿಲ್ಲ. ಆದಾಗ್ಯೂ ಮುಂದಿನ ಓವರ್‌ನಲ್ಲಿ ಶಿಮ್ರಿನ್ ಹೆಟ್ಮೆಯರ್(8) ವಿಕೆಟನ್ನು ಪಡೆಯಲು ಯಶಸ್ವಿಯಾದರು.

ಸ್ಪಿನ್ನರ್ ಮೊಯಿನ್ ಅಲಿ(4-36) ಎರಡನೇ ಯಶಸ್ವಿ ಬೌಲರ್ ಎನಿಸಿಕೊಂಡರು. ಅಲಿ ಆರಂಭಿಕ ಆಟಗಾರ ಹಾಗೂ ನಾಯಕ ಕ್ರೆಗ್ ಬ್ರಾತ್‌ವೇಟ್(12) ಹಾಗೂ ಜಾನ್ ಕ್ಯಾಂಪ್‌ಬೆಲ್(41)ರನ್ನು ಪೆವಿಲಿಯನ್‌ಗೆ ಕಳುಹಿಸಿದರು. 63 ಎಸೆತಗಳಲ್ಲಿ 41 ರನ್ ಕಲೆ ಹಾಕಿದ ಕ್ಯಾಂಪ್‌ಬೆಲ್ ತನ್ನ ತಂಡದ ಪರ ಸಿಂಹಪಾಲು ರನ್ ಗಳಿಸಿ ಇಂಗ್ಲೆಂಡ್‌ಗೆ ಭೀತಿ ಹುಟ್ಟಿಸಿದ್ದರು.

ಟೀ ವಿರಾಮದ ಬಳಿಕ ತನ್ನ ದಾಳಿ ಮುಂದುವರಿಸಿದ ವುಡ್ ಅವರು ಡರೆನ್ ಬ್ರಾವೊ(6) ವಿಕೆಟನ್ನು ಪಡೆದರು. ವಿಕೆಟ್‌ಕೀಪರ್ ಡೌರಿಚ್(38)ಒಂದಷ್ಟು ಪ್ರತಿರೋಧ ತೋರಿದರು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ವೆಸ್ಟ್‌ಇಂಡೀಸ್ ಈಗಾಗಲೇ ಸರಣಿ ಜಯಿಸಿದೆ. ಇಂಗ್ಲೆಂಡ್ ಕೊನೆಯ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶ ಪಡೆದಿದೆ.

►ಇಂಗ್ಲೆಂಡ್ 126/2: ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ 40 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ. ವನ್‌ಡೌನ್ ದಾಂಡಿಗ ಡೆನ್ಲೀ(ಔಟಾಗದೆ 59, 80 ಎಸೆತ, 9 ಬೌಂಡರಿ) ಹಾಗೂ ನಾಯಕ ಜೋ ರೂಟ್(21) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಒಟ್ಟು 294 ರನ್ ಮುನ್ನಡೆಯಲ್ಲಿದೆ.

ಮಿಂಚಿದ ರೋಚ್: ಇಂಗ್ಲೆಂಡ್ 277/10

ಇದಕ್ಕು ಮೊದಲು 48 ರನ್‌ಗೆ 4 ವಿಕೆಟ್‌ಗಳನ್ನು ಪಡೆದ ವಿಂಡೀಸ್ ವೇಗದ ಬೌಲರ್ ಕೆಮರ್ ರೋಚ್ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 277 ರನ್‌ಗೆ ನಿಯಂತ್ರಿಸಿದರು. ಎರಡನೇ ಹೊಸ ಚೆಂಡಿನಲ್ಲಿ ಉತ್ತಮ ದಾಳಿ ಸಂಘಟಿಸಿದ ವಿಂಡೀಸ್‌ಗೆ ಚುರುಕಿನ ಫೀಲ್ಡಿಂಗ್ ವರವಾಯಿತು. ಜೋಸ್ ಬಟ್ಲರ್ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ 67 ರನ್‌ಗೆ ಔಟಾದರು. ಬಟ್ಲರ್ ಔಟಾಗುವುದರೊಂದಿಗೆ ಸ್ಟೋಕ್ಸ್ (79) ಅವರೊಂದಿಗಿನ 5ನೇ ವಿಕೆಟ್‌ಗೆ 125 ರನ್ ಜೊತೆಯಾಟ ಬೇರ್ಪಟ್ಟಿತ್ತು.

ವೆಸ್ಟ್‌ಇಂಡೀಸ್ ಏಳು ರನ್ ನೀಡಿ ಕೊನೆಯ 4 ವಿಕೆಟ್‌ಗಳನ್ನು ಉರುಳಿಸಿತು. ರೋಚ್ ಯಶಸ್ವಿ ಬೌಲರ್ ಎನಿಸಿಕೊಂಡರು. ಗ್ಯಾಬ್ರಿಯಲ್, ಅಲ್ಝಾರಿ ಜೋಸೆಫ್ ಹಾಗೂ ಕೀಮೊ ಪಾಲ್ ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News