ಪಾಕಿಸ್ತಾನ ಏಕದಿನ ಸರಣಿ ಸಂದರ್ಭ ಸ್ಮಿತ್, ವಾರ್ನರ್ ನಿಷೇಧ ಅವಧಿ ಅಂತ್ಯ

Update: 2019-02-11 18:34 GMT

ಅಬುಧಾಬಿ, ಫೆ.11: ಮುಂಬರುವ ಯುಎಇನಲ್ಲಿ ನಡೆಯುವ ಪಾಕಿಸ್ತಾನ ವಿರುದ್ಧದ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯ ಮಧ್ಯೆ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್‌ಗೆ ವಿಧಿಸಲಾಗಿದ್ದ ಒಂದು ವರ್ಷ ನಿಷೇಧ ಅವಧಿ ಕೊನೆಗೊಳ್ಳಲಿದ್ದು, ಈ ಇಬ್ಬರು ಆಟಗಾರರು ತಕ್ಷಣವೇ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ವಾಪಸಾಗುವ ನಿರೀಕ್ಷೆಯಿದೆ.

ಪಾಕ್-ಆಸೀಸ್ ಮಧ್ಯೆ ಐದು ಪಂದ್ಯಗಳ ಏಕದಿನ ಸರಣಿಯು ಮಾ.22ರಿಂದ 31ರ ತನಕ ನಡೆಯಲಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಕಳೆದ ವರ್ಷ ದ.ಆಫ್ರಿಕದ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಸ್ಮಿತ್ ಹಾಗೂ ವಾರ್ನರ್‌ಗೆ ನಿಷೇಧ ಹೇರಲಾಗಿತ್ತು. ಈ ಇಬ್ಬರು ಮಾ.29 ರಂದು ಮತ್ತೊಮ್ಮೆ ಆಯ್ಕೆಗೆ ಅರ್ಹರಾಗಿದ್ದಾರೆ. ಇಬ್ಬರಿಗೆ ಪಾಕ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶವಿದೆ. ಆಸ್ಟ್ರೇಲಿಯ ಮಾ.22ರಂದು ಶಾರ್ಜಾದಲ್ಲಿ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಎರಡು ದಿನಗಳ ಬಳಿಕ ಶಾರ್ಜಾದಲ್ಲೇ ಎರಡನೇ ಪಂದ್ಯ ನಡೆಯುವುದು.

ಉಭಯ ತಂಡಗಳು ಮಾ.27 ರಂದು ಅಬುಧಾಬಿಯಲ್ಲಿ ಮೂರನೇ ಪಂದ್ಯವನ್ನು ಆಡಲಿವೆ. ಸರಣಿಯ ಅಂತಿಮ ಎರಡು ಪಂದ್ಯಗಳು ದುಬೈನಲ್ಲಿ ಮಾ.29 ಹಾಗೂ 31ಕ್ಕೆ ನಡೆಯಲಿದೆ. ಈ ವರ್ಷದ ಐಪಿಎಲ್ ಟೂರ್ನಿಯು ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ. ಪಾಕ್ ಸರಣಿಗೆ ಆಯ್ಕೆಯಾಗಿರುವ ಆಸೀಸ್ ಆಟಗಾರರು ಎ.2ರ ತನಕ ಐಪಿಎಲ್‌ಗೆ ಲಭ್ಯವಿರುವ ಸಾಧ್ಯತೆಯಿಲ್ಲ. ಏಕದಿನ ಸರಣಿಗೆ ಆಯ್ಕೆಯಾಗುವ ಆಸೀಸ್ ಆಟಗಾರರನ್ನು ತಕ್ಷಣವೇ ಐಪಿಎಲ್‌ಗೆ ಆಡಲು ಬಿಡುವ ಸಾಧ್ಯತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News