ಝೊಮ್ಯಾಟೋ ಡೆಲಿವರಿ ಬಾಯ್ ಆದ ಸ್ನಾತಕೋತ್ತರ ಪದವೀಧರ!

Update: 2019-02-12 13:35 GMT

ಕೊಲ್ಕತ್ತಾ, ಫೆ. 12: ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯ ಅಗತ್ಯವಿದೆ ಎನ್ನುವುದನ್ನು ನಿದರ್ಶನ ಸಹಿತ ಪೋಸ್ಟ್ ಮಾಡಿದ ಯುವಕೊಬ್ಬನ ಫೇಸ್‌ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

"ಬಹುಶಃ ಝೊಮಾಟೊದಲ್ಲಿ ತಿನಸಿಗಾಗಿ ಆದೇಶ ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟ ಏಕೈಕ ನಿದರ್ಶನ ಇದು" ಎಂದು ಬಣ್ಣಿಸಿರುವ ಶೌವಿಕ್ ದತ್ತಾ ಎಂಬ ಫೇಸ್‌ಬುಕ್ ಬಳಕೆದಾರ, ತಮಗೆ ಊಟ ತಂದುಕೊಟ್ಟ ವ್ಯಕ್ತಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ ಎಂದು ವಿವರಿಸಿದ್ದಾರೆ.

"ನಾನು ಆರ್ಡರ್ ಕೊಟ್ಟ ತಿನಸು ತಂದಿಟ್ಟ ಮೆರಾಝ್ ಎಂಬ ವ್ಯಕ್ತಿ ಒಳ್ಳೆಯ ರೇಟಿಂಗ್ ನೀಡುವಂತೆ ಮನವಿ ಮಾಡಿಕೊಂಡಾಗ ಆತನ ಬಗ್ಗೆ ಕುತೂಲಹದಿಂದ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಆಗ ಈ ವಿಷಯ ತಿಳಿದುಬಂತು" ಎಂದು ದತ್ತಾ ಹೇಳಿದ್ದಾರೆ. ಇದು ತಮ್ಮ ಜೀವನದ ಅತ್ಯಂತ ಮುಜುಗರದ ಸನ್ನಿವೇಶ ಎಂದೂ ಅವರು ತಿಳಿಸಿದ್ದಾರೆ.

ಕೊಲ್ಕತ್ತಾ ವಿವಿಯಿಂದ ಎಂಕಾಂ ಪದವಿ ಪಡೆದಿರುವ ಮೆರಾಜ್, ಹಣಕಾಸು ಅಥವಾ ಹೂಡಿಕೆ ಬ್ಯಾಂಕಿಂಗ್ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿ ಕೂಡಾ ಪಡೆದಿರುವುದು ಅವರ ಜತೆಗಿನ ಸಂಭಾಷಣೆಯಿಂದ ತಿಳಿದುಬಂದಿದೆ. ಸ್ನಾತಕೋತ್ತರ ಪದವೀಧರರೊಬ್ಬರು ಪದವಿ ವಿದ್ಯಾರ್ಥಿ ಆದೇಶ ಮಾಡಿದ ತಿನಸು ಪೂರೈಕೆ ಮಾಡುತ್ತಿರುವುದು ತೀರಾ ವಿಚಿತ್ರ ಸ್ಥಿತಿ. ಈ ದೇಶ ಬದಲಾಗಬೇಕಿದೆ. ಈ ರಾಜ್ಯ ಬದಲಾಗಬೇಕಿದೆ. ಹೆಚ್ಚು ಉದ್ಯೋಗ ಸೃಷ್ಟಿಸಬೇಕಾಗಿದೆ. ನಾವು ಕಠಿಣ ಸ್ಥಿತಿಯಲ್ಲಿದ್ದೇವೆ. ಈ ದೇಶ ಬದಲಾಗಬೇಕಾದ ಅಗತ್ಯವಿದೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ಈ ಪೋಸ್ಟ್ 2500ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದು ಶೇರ್ ಆಗಿದೆ. "ಮೆರಾಜ್ ಕಠಿಣ ಪರಿಶ್ರಮಿ. ಮೂಲದಿಂದ ತಿಳಿಯುತ್ತಿದ್ದಾರೆ. ಅವರು ಖಂಡಿತಾ ಯಶಸ್ವಿಯಾಗುತ್ತಾರೆ" ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇಡೀ ವ್ಯವಸ್ಥೆಯೇ ಬದಲಾಗಬೇಕು ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News