ಬಿಎಸ್ಎನ್ಎಲ್ : 35,000 ಉದ್ಯೋಗಿಗಳು ಮನೆಗೆ ?

Update: 2019-02-12 05:17 GMT

ಹೊಸದಿಲ್ಲಿ, ಫೆ. 12: ಮುಕೇಶ್ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಎಬ್ಬಿಸಿದ ಬಿರುಗಾಳಿಯಿಂದಾಗಿ ಇತರ ಖಾಸಗಿ ಸಂಸ್ಥೆಗಳಂತೆಯೇ ಸರಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕೂಡ ಅದೆಷ್ಟು ತೀವ್ರ ಬಾಧಿತವಾಗಿದೆಯೆಂದರೆ ಸುಮಾರು 35,000 ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಖರ್ಚುವೆಚ್ಚಗಳನ್ನು ಕಡಿತಗೊಳಿಸಿ ಸಂಸ್ಥೆಯನ್ನು ಉಳಿಸಲು ಇದು ಅನಿವಾರ್ಯವೆಂದೂ ಹೇಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಬಿಎಸ್‍ಎನ್‍ಎಲ್ ನಲ್ಲಿ ಸುಮಾರು 1,74,000 ಉದ್ಯೋಗಿಗಳಿದ್ದು ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ಸುಮಾರು 25,000ದಿಂದ 30,000 ಉದ್ಯೋಗಿಗಳಿದ್ದಾರೆ. ಟೆಲಿಕಾಂ ಕ್ಷೇತ್ರ ಇಂದು ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ  ಬಿಎಸ್‍ಎನ್‍ಎಲ್ ನಷ್ಟಗಳನ್ನು ಕಡಿಮೆಗೊಳಿಸಿ ಹೇಗೆ  ಮುಂದುವರಿದುಕೊಂಡು ಹೋಗಬಹುದೆಂದು ತಿಳಿಯಲು ಐಐಎಂ ಅಹ್ಮದಾಬಾದ್ ತಜ್ಞರಿಂದ ವರದಿ ಸಲ್ಲಿಸುವಂತೆ ಈ ಹಿಂದೆಯೇ ಹೇಳಲಾಗಿದೆಯೆನ್ನಲಾಗಿದ್ದು, ಈ ವರದಿಯು ಕನಿಷ್ಠ 35,000 ಉದ್ಯೋಗಿಗಳನ್ನು ಸೇವೆಯಿಂದ ಹೊರಗಿಡಬೇಕೆಂದು ಸಲಹೆ ನೀಡಿದ್ದು ಅವರಿಗೆ ವಿಆರ್ ಎಸ್ ಸೌಲಭ್ಯ ಒದಗಿಸುವಂತೆ ಕೂಡ ಶಿಫಾರಸು ಮಾಡಲಾಗಿದೆ. ಇದಕ್ಕಾಗಿ ರೂ 13,000 ಕೋಟಿ ವೆಚ್ಚ ತಗಲುವುದೆಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಐಐಎಂ ಅಹ್ಮದಾಬಾದ್ ನ ಅಂತಿಮ ವರದಿ ಇನ್ನಷ್ಟೇ ಸಲ್ಲಿಕೆಯಾಗಬೇಕಿದೆ.

ಈಗಾಗಲೇ ಬಿಎಸ್‍ಎನ್‍ಎಲ್ ಉದ್ಯೋಗಿಗಳ ಪ್ರವಾಸ ಭತ್ತೆಗಳನ್ನು ನಿಲ್ಲಿಸಲಾಗಿದ್ದು ವೈದ್ಯಕೀಯ ಭತ್ತೆಯನ್ನೂ ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಸದ್ಯದ ಮಟ್ಟಿಗೆ ಉದ್ಯೋಗಿಗಳಿಗೆ ಎಲ್‍ಟಿಸಿ ಸೌಲಭ್ಯ ನೀಡಲಾಗುತ್ತಿಲ್ಲ. ವಿದ್ಯುತ್, ಆಡಳಿತಾತ್ಮಕ ವೆಚ್ಚಗಳನ್ನೂ ಕಡಿತಗೊಳಿಸಲಾಗುತ್ತಿದೆ ಎಂದು ಬಿಎಸ್‍ಎನ್‍ಎಲ್ ಆಡಳಿತ ನಿರ್ದೇಶಕ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ. ವಿಆರ್ ಎಸ್ ವಿಚಾರದಲ್ಲೂ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದು  ಬಿಎಸ್‍ಎನ್‍ಎಲ್ ಅಸ್ತಿತ್ವದಲ್ಲಿ ಮುಂದುವರಿಯಬೇಕಾದರೆ ಕೆಲವೊಂದು ಕ್ರಮಗಳು ಅಗತ್ಯ ಎಂದು ತಿಳಿಸಿದ್ದಾರೆ.

ಉದ್ಯೋಗಿಗಳಿಗೆ ನೀಡಲಾಗುವ ವಿವಿಧ ಸೌಲಭ್ಯಗಳನ್ನು ಕಡಿತಗೊಳಿಸಿದ ಪರಿಣಾಮ ಬಿಎಸ್‍ಎನ್‍ಎಲ್  ವರ್ಷವೊಂದಕ್ಕೆ 2,500 ಕೋಟಿ ರೂ. ಉಳಿತಾಯ ಮಾಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಸದ್ಯ ಬಿಎಸ್‍ಎನ್‍ಎಲ್ ವಾರ್ಷಿಕವಾಗಿ 15,000 ಕೋಟಿ ರೂ. ವೆಚ್ಚ ಮಾಡುತ್ತಿದೆ.

 2018ರ ಜುಲೈ-ಅಕ್ಟೋಬರ್ ತ್ರೈಮಾಸಿಕದಲ್ಲಿ ಸಂಸ್ಥೆ ರೂ 1,925.33 ಕೋಟಿ ನಷ್ಟ ಅನುಭವಿಸಿದ್ದು ಆದಾಯ ಶೇ 15ರಷ್ಟು ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News